ಬೆಂಗಳೂರು: ರೈತ ಮುಖಂಡರು, ಅಧಿಕಾರಿಗಳೊಂದಿಗೆ ಇದೇ 18ರಂದು ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ. ನಾರಾಯಣಗೌಡ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಷುಗರ್ ಸಂಬಂಧ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
18ರಂದು ಸಭೆ ನಡೆಸಿ ಮೈಷುಗರ್ ಕಾರ್ಖಾನೆ, ಕಬ್ಬು ಬೆಳೆಗೆ ಬೆಲೆ ನಿಗದಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಸಕ್ಕರೆ ಸಚಿವರು, ಆಯುಕ್ತರು, ಕಾರ್ಖಾನೆಯ ಮಾಲೀಕರ ಸಮ್ಮುಖದಲ್ಲಿ ಚರ್ಚಿಸಲಾಗುವುದು. ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ರೈತರಿಗಾಗಿ ಕಾಲ್ ಸೆಂಟರ್ ಪ್ರಾರಂಭಿಸಿ, ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ದಾಳಿ ನಡೆಸಿ ಪರವಾನಗಿ ರದ್ದುಗೊಳಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.