ಮೆಡಿಕಲ್ ಮಾಫಿಯಾದಿಂದ ದಕ್ಷಿಣ ಕನ್ನಡಕ್ಕೆ ದ್ರೋಹ

Prasthutha|

ಫಾತಿಮಾ ನುಸೈಬಾ, ಕಲ್ಲಡ್ಕ

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂಬುದು ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆ. ನಮ್ಮನ್ನಾಳುವವರು ಜಿಲ್ಲೆಗೊಂದು ಸರ್ಕಾರಿ ಮೆಡಿಕಲಗ ಕಾಲೇಜು ಸ್ಥಾಪನೆ ಮಾಡುವ ಭರವಸೆಗಳನ್ನು ಕೊಟ್ಟಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಈವರೆಗೆ ಆ ಭಾಗ್ಯ ಸಿಕ್ಕಿಲ್ಲ. ರಾಮನಗರ ಜಿಲ್ಲೆಗೆ ಎರಡೆರಡು ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬೇಡಿಕೆಗೆ ಕಿವಿಗೊಟ್ಟಿಲ್ಲ.‌ ಸರ್ಕಾರದ ಈ ನಿರ್ಲಕ್ಷ್ಯವನ್ನು ದ.ಕ ಜಿಲ್ಲೆಯ ಜನಸಾಮಾನ್ಯರು, ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಪ್ರಬಲವಾಗಿ ಖಂಡಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ಹೊರ ರಾಜ್ಯಗಳಿಂದಲೂ ಬಂದಿರುವ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಲಕ್ಷಗಳಲ್ಲಿ, ಕೋಟಿಗಳಲ್ಲಿ ಫೀಸು ಕಟ್ಟಿ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಬಡ ಮಕ್ಕಳ ಪಾಲಿಗೆ ಮಾತ್ರ ಇದು ಗಗನ ಕುಸುಮ.

- Advertisement -

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನಿಯಾಗಿ ಗುರುತಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು, ಜಿಲ್ಲೆಯು ದೊಡ್ಡ ಮಟ್ಟದಲ್ಲಿ ಮೆಡಿಕಲ್ ಮಾಫಿಯಾಗೆ ಬಲಿಯಾಗಿರುವುದರ ಸ್ಪಷ್ಟ ನಿದರ್ಶವಾಗಿದೆ. ಈ ಮಾಫಿಯಾದ ಲಾಭ ಪಡೆಯುತ್ತಿರುವ ಕಾಣದ ಕೈಗಳ ಪಾತ್ರವೂ ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವಕಾಶ ನಿರಾಕರಿಸುತ್ತಿದೆ.

ಶಿಕ್ಷಣ ವ್ಯವಸ್ಥೆಯೂ ಕೂಡ ವ್ಯಾವಹಾರಿಕವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ಮೆಡಿಕಲ್ ಮಾಫಿಯಾ ಹಾಗೂ ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಂತೆ ತಡೆಯುತ್ತಿದೆ ಎನ್ನುವುದು ಇಲ್ಲಿನ ಜನಸಾಮಾನ್ಯರ ಬಹಿರಂಗ ಆರೋಪವಾಗಿದೆ.
ಯಾವುದೇ ಒಬ್ಬ ಜನಪ್ರತಿನಿಧಿಗೂ ಕೂಡ ಇದನ್ನು ಅಲ್ಲಗಳೆಯಲು ಸಾಧ್ಯವಾಗದೆ, ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ದೊಡ್ಡ ಮಟ್ಟದ ಸಂಘರ್ಷಗಳು, ಹೋರಾಟಗಳು ಮತ್ತು‌ ಚರ್ಚೆಗಳು, ಸರ್ಕಾರಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಅಲ್ಪವಾದರೂ ನಡೆದಿದ್ದರೆ ಬಹುಶಃ ಇಂದು ದಕ್ಷಿಣ ಕನ್ನಡದ ಬಡ ಮಕ್ಕಳು ಕೂಡ ವೈದ್ಯಕೀಯ ರಂಗದಲ್ಲಿ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಿದ್ದರು. ಆದರೆ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಸ್ವ ಹಿತಾಸಕ್ತಿ ಮತ್ತು ಬಂಡವಾಳಶಾಹಿಗಳ ತೆಕ್ಕೆಗೆ ಜೋತು ಬಿದ್ದಿರುವ ಶಿಕ್ಷಣ ವ್ಯವಸ್ಥೆಗಳಿಂದಾಗಿ ಅದೆಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಮೂಲೆಗುಂಪಾಗುತ್ತಿದ್ದಾರೆ. ಲಕ್ಷ ಲಕ್ಷ ಫೀಸು ಕಟ್ಟಿ ವೈದ್ಯಕೀಯ ಪದವಿ ಗಿಟ್ಟಿಸಿಕೊಂಡ ಬಹುಪಾಲು ವೈದ್ಯ ವರ್ಗ ಕೇವಲ ಹಣ ಸಂಪಾದನೆಯನ್ನು ಗುರಿಯಾಗಿಸಿಕೊಂಡು ಮಾನವೀಯತೆ ಮರೆತು ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ನಿತ್ಯ ಕೇಳಿಬರುವ ಸಂಗತಿ. ಇದಕ್ಕೆಲ್ಲ ಬ್ರೇಕ್ ಬೀಳಬೇಕಾದರೆ ಜಿಲ್ಲೆಗೊಂದು‌ ಸರ್ಕಾರಿ‌ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ ಬಡವರ ಮಕ್ಕಳು ವೈದ್ಯರಾಗುವಂತಾಗಬೇಕು.

ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ನಾನಾ ರೀತಿಯ ರೋಗಗಳು ಕೂಡ ಉಧ್ಬವವಾಗುತ್ತಿದ್ದು ಇದರ ಖರ್ಚು ವೆಚ್ಚಗಳನ್ನು ಭರಿಸಲಾಗದೆ ಪರದಾಡುವ ಬಡ ಕುಟುಂಬಗಳ ಕುರಿತಾಗಿ ಆಲೋಚನೆ ಮಾಡುವ , ನೈಜ ಜನಪರ ಕಾಳಜಿ ಹೊಂದಿರುವ ರಾಜಕಾರಣಿಗಳು ಇಲ್ಲದಿರುವುದು ಈ ಸಮಾಜದ ದುರಂತವಾಗಿದೆ. ಇತ್ತೀಚೆಗಷ್ಟೇ, ಅಪರೂಪದ ಕಾಯಿಲೆಯೊಂದಕ್ಕೆ ತುತ್ತಾಗಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ “ದಯಾಮರಣವನ್ನಾದರೂ ಕರುಣಿಸಿ” ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಇದೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಓರ್ವ ಗ್ರಹಿಣಿಯ ಅಸಹಾಯಕತೆಯನ್ನು ನಾವಿಲ್ಲಿ ಗಮನಿಸಬೇಕಿದೆ. ಇಂತಹ ಅದೆಷ್ಟೋ ಅಸಹಾಯಕ ಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸುವ ಸರ್ಕಾರಿ ಮೆಡಿಕಲ್ ಕಾಲೇಜು ಈ ಜಿಲ್ಲೆಗೆ ಅತ್ಯಗತ್ಯವಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಯಲ್ಲಿ ಸರ್ಕಾರದ ಸಂಪೂರ್ಣ ಭಾಗೀಧಾರಿಕೆ ಇರಬೇಕು. ಆದರೆ ಸರ್ಕಾರಗಳ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳು ಖಾಸಗೀಕರಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಯೂ ಕೂಡ ಖಾಸಗೀಕರಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಾಣ ಹೋದರೂ ಮೃತದೇಹವನ್ನು ಮುಂದಿಟ್ಟುಕೊಂಡು ದಂಧೆ ನಡೆಸುವಂತಹ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು, ಪ್ರತಿ ಬಡ ಕುಟುಂಬದಲ್ಲೂ ಓರ್ವ ವೈದ್ಯರನ್ನು ಹುಟ್ಟು ಹಾಕಲು, ಬಡವರ ರಕ್ತ ಹೀರುವ ಮೆಡಿಕಲ್ ಕಾಲೇಜುಗಳಿಗೆ ಅಂತ್ಯ ಹಾಡಲು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಸರ್ಕಾರಿ ಮೆಡಿಕಲ್ ಕಾಲೇಜು ಅಗತ್ಯವಾಗಿದ್ದು ಧರ್ಮಾತೀತವಾಗಿ, ಪಕ್ಷಾತೀತವಾಗಿ ಪ್ರಜ್ಞಾವಂತ ನಾಗರಿಕರೆಲ್ಲರೂ ಒಗ್ಗಟ್ಟಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವುದು ಅನಿವಾರ್ಯವಾಗಿದೆ.
ಈ ಬೇಡಿಕೆಯು ದೊಡ್ಡ ಮಟ್ಟದ ಹೋರಾಟದ ರೂಪ ಪಡೆಯುವ ಮುನ್ನ ಸರ್ಕಾರವೇ ಎಚ್ಚೆತ್ತುಕೊಂಡು ಒಪ್ಪಿಗೆಯ ಮುದ್ರೆಯೊತ್ತಿ ದಕ್ಷಿಣ ಕನ್ನಡದ ಬಡ ಜನತೆಯೊಂದಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕಿದೆ.



Join Whatsapp