ಫೆಲೆಸ್ತೀನ್ ಬಾಲಕಿಯನ್ನು ಉಕ್ರೇನ್ ಬಾಲಕಿ ಎಂದು ತೋರಿಸಿ ಮುಖಭಂಗಕ್ಕೀಡಾದ ಮಾಧ್ಯಮಗಳು

Prasthutha|

ಬೆಂಗಳೂರು: ಚಾನೆಲ್ ನ ಟಿಆರ್ ಪಿ ಹೆಚ್ಚಿಸುವ ಭರದಲ್ಲಿ ಯಾವುದೋ ಹಳೆಯ ವೀಡಿಯೋಗಳಿಗೆ ಹೊಸ ತಲೆ ತಲೆಬರಹ ಕೊಟ್ಟು ವಿಜೃಂಭಿಸಲು ಹೊರಟ ಕನ್ನಡದ ಕೆಲವೊಂದು ಮಾಧ್ಯಮಗಳು ಸಾರ್ವಜನಿಕರ ಮಧ್ಯೆ ನಗೆಪಾಟಲಿಗೀಡಾಗಿವೆ.

- Advertisement -

 “ರಷ್ಯಾ ಸೈನಿಕನಿಗೆ ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ಬೆದರಿಸುತ್ತಿರುವ ಉಕ್ರೇನ್ ದೇಶದ ಬಾಲಕಿ” ಎಂಬ ತಲೆಬರಹದಲ್ಲಿ ಪುಟ್ಟ ಬಾಲಕಿಯ ವೀಡಿಯೋವೊಂದು ವೈರಲ್ ಆಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಹಲವು ಹಳೆಯ ಹಾಗೂ ಸಂಬಂಧವಿಲ್ಲದ ಚಿತ್ರಗಳು ಮತ್ತು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದೀಗ ಬಲಪಂಥೀಯ ವಿಚಾರಗಳೊಂದಿಗೆ ಗುರುತಿಸಿಕೊಂಡಿರುವ ಕನ್ನಡದ ಸುದ್ದಿ ಚಾನೆಲ್ ಗಳಾದ ಪಬ್ಲಿಕ್ ಟಿವಿ ಮತ್ತು ಸುವರ್ಣಾ ನ್ಯೂಸ್ ಈ ಬಗ್ಗೆ ವೀಡಿಯೋ ಸುದ್ದಿ ಮಾಡಿವೆ.

- Advertisement -

ಪಬ್ಲಿಕ್ ಟಿವಿ ‘ಈ ಕ್ಷಣವೇ ನಮ್ಮ ದೇಶ ಬಿಟ್ಟು ಹೋಗಿ- ಉಕ್ರೇನ್ ಬಾಲಕಿಯ ಸಿಟ್ಟು’ ಎಂಬ ಶೀರ್ಷಿಕೆಯಲ್ಲಿ ಬಾಲಕಿಯ ಕುರಿತು ತನ್ನ ವೆಬ್ ಸೈಟ್ ನಲ್ಲಿ ಸುದ್ದಿ ಮಾಡಿದೆ. ಸುವರ್ಣಾ ನ್ಯೂಸ್  ‘ನಮ್ಮ ದೇಶವನ್ನು ಬಿಟ್ಟು ತೊಲಗಿ, ಇಲ್ಲದಿದ್ರೆ ಸಾಯಿಸುವೆ, ರಷ್ಯಾ ಸೈನಿಕರಿಗೆ ಉಕ್ರೇನ್ ಬಾಲಕಿ ಆವಾಜ್’ ಎಂಬ ಶೀರ್ಷಿಕೆಯಲ್ಲಿ ತಮ್ಮ ವಾಹಿನಿ ಹಾಗೂ ಫೇಸ್‌ಬುಕ್ ಪೇಜ್ ನಲ್ಲಿ  ಈ ಸುದ್ದಿ ಮತ್ತು ವಿಡಿಯೊವನ್ನು ಅಪ್‌ಲೋಡ್ ಮಾಡಿದೆ.

ಆದರೆ ಇದು 2012 ನೇ ಇಸವಿಯ ಪ್ಯಾಲೆಸ್ತೀನ್ ದೇಶದ ವೀಡಿಯೋ ಆಗಿದ್ದು, ಫ್ಯಾಲೆಸ್ತೀನಿ ಪ್ರತಿರೋಧ ಹೋರಾಟದ ಐಕಾನ್ ಬಾಲಕಿ ಎಂದು ಹೆಸರುವಾಸಿಯಾದ ಆ ದಿಟ್ಟ ಬಾಲಕಿಯ ಹೆಸರು ಅಹೆದ್ ತಮೀಮಿ ಎಂದಾಗಿದೆ. ಈ ವೀಡಿಯೋದಲ್ಲಿರುವ ಸೈನಿಕ ವಸಾಹತುಶಾಹಿ ದೇಶವಾದ ಇಸ್ರೇಲ್ ನವರಾಗಿದ್ದಾರೆ.

ತನ್ನ ತಾಯ್ನಾಡಿನಲ್ಲಿ ಇಸ್ರೇಲಿ ವಸಾಹತುಗಾರರು ಮಾಡುವ ಅಕ್ರಮಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿರುವ ಅಹೆದ್ ತಮೀಮಿ 2018 ರಲ್ಲಿ ಇಸ್ರೇಲಿ ಮಿಲಿಟರಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಳು.

ಒಟ್ಟಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಬಾಲಕಿಯ ವೀಡಿಯೋಗೂ, ರಷ್ಯಾ-ಉಕ್ರೇನ್ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲ.

Join Whatsapp