ಜಿ20 ಶೃಂಗಸಭೆಗೆ ಸಿದ್ಧವಾಗಿದೆ ಅತ್ಯಾಧುನಿಕ ಮಾಧ್ಯಮ ಕೇಂದ್ರ

Prasthutha|

ಹೊಸದಿಲ್ಲಿ: ಜಿ20 ಶೃಂಗಸಭೆಗೆ ದೆಹಲಿಯಲ್ಲಿ ಭರದಿಂದ ಸಿದ್ಧತೆ ಸಾಗಿದೆ. ಪ್ರಗತಿ ಮೈದಾನದ ಐಇಸಿಸಿ ಸಂಕೀರ್ಣದಲ್ಲಿ ನಿರ್ಮಿಸಲಾದ ‘ಭಾರತ ಮಂಟಪ’ದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ 25 ಕ್ಕೂ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

- Advertisement -

ಭರದಿಂದ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಐಟಿಪಿಒ ಕಾಂಪ್ಲೆಕ್ಸ್‌ನಲ್ಲಿರುವ ಭವ್ಯವಾದ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರದ ವಿಡಿಯೋ ತುಣುಕನ್ನು ಹಂಚಿಕೊಂಡಿದೆ. ಇದು ವಿಶ್ವದಾದ್ಯಂತದ ಸಾವಿರಾರು ಪತ್ರಕರ್ತರು ಮತ್ತು ಮಾಧ್ಯಮ ವ್ಯಕ್ತಿಗಳಿಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಮಾಧ್ಯಮ ಕೇಂದ್ರದ ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ, ಮುಂಬರುವ ಜಿ20 ಶೃಂಗಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಸ್ವಾಗತಿಸಲು ಸಿದ್ಧವಾಗಿರುವ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರದ ಒಂದು ನೋಟ ಇಲ್ಲಿದೆ. ಜಾಗತಿಕ ಮಾಧ್ಯಮ ಪ್ರತಿನಿಧಿಗಳಿಗೆ ಸ್ವಾಗತ ಎಂದು ಅವರು ಉಲ್ಲೇಖಿಸಿದ್ದಾರೆ.

- Advertisement -

ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿರುವ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಕಾರ್ಮಿಕರು ಅಂತಿಮ ಸ್ಪರ್ಶ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಅತ್ಯಾಧುನಿಕ ಕೇಂದ್ರವು ವಿಶಾಲವಾದ ಸಭಾಂಗಣಗಳು, ಒಂಬತ್ತು ಕೆಲಸದ ಝೋನ್​ಗಳು, ಸ್ಟುಡಿಯೋಗಳು, ನಾಲ್ಕು ಮೀಡಿಯಾ ಬ್ರೀಫಿಂಗ್ ಹಾಲ್‌ಗಳು, ಆರು ಸಂದರ್ಶನ ಕೊಠಡಿಗಳು, ಸುಮಾರು 1,300 ವರ್ಕ್‌ಸ್ಟೇಷನ್‌ಗಳು ಮತ್ತು ಜಿ20 ಶೃಂಗಸಭೆಯನ್ನು ಕವರ್ ಮಾಡುವ ಪತ್ರಕರ್ತರಿಗಾಗಿ ತೆರೆದ ಕಾರ್ಯಸ್ಥಳಗಳನ್ನು ಹೊಂದಿದೆ. ರಾಯಭಾರ ಕಚೇರಿಯ ಪ್ರೆಸ್ ಅಧಿಕಾರಿಗಳು ಮತ್ತು ವಿದೇಶಿ ಅಧಿಕಾರಿಗಳಿಗೆ ಗೊತ್ತುಪಡಿಸಿದ ವಲಯಗಳಿವೆ. ಹೈಸ್ಪೀಡ್ ಇಂಟರ್ನೆಟ್, ಅಂತರಾಷ್ಟ್ರೀಯ ಪ್ರಸಾರ ಕೇಂದ್ರ, ವಿಶ್ರಾಂತಿ ಕೊಠಡಿಗಳು, ಮನರಂಜನಾ ವಲಯಗಳು, ಮಾಧ್ಯಮ ಬೂತ್‌ಗಳು, ಲೈವ್ ವರದಿ ಮಾಡುವ ಸ್ಥಾನಗಳು, ಸಹಾಯ ಕೇಂದ್ರ, ವೈದ್ಯಕೀಯ ಕೊಠಡಿ ಇವು ಕೇಂದ್ರದಲ್ಲಿ ಲಭ್ಯವಿರುವ ಇತರ ಸೌಲಭ್ಯಗಳಾಗಿವೆ.

ಸುಮಾರು 2,700 ಕೋಟಿ ವೆಚ್ಚದಲ್ಲಿ ಭಾರತ ಮಂಟಪವನ್ನು ನಿರ್ಮಿಸಲಾಗಿದೆ. ಇದು ಸುಮಾರು 123 ಎಕರೆ ಕ್ಯಾಂಪಸ್ ಪ್ರದೇಶವನ್ನು ಹೊಂದಿದೆ ಮತ್ತು ಇದು ದೇಶದ ಅತಿದೊಡ್ಡ ಎಂಐಸಿಇ (ಸಭೆಗಳು, ಪ್ರೋತ್ಸಾಹಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು) ತಾಣವಾಗಿ ಕಾರ್ಯನಿರ್ವಹಿಸುತ್ತದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಯುಕೆ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇತರರು 18 ನೇ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

Join Whatsapp