►ಕಅಬಾಲಯ ಸ್ಪರ್ಶಿಸಲು, ಹಜರುಲ್ ಅಸ್ವದ್ ಚುಂಬಿಸಲು ಅವಕಾಶ
ಜಿದ್ದಾ: ಪವಿತ್ರ ಕಅಬಾದ ಸುತ್ತಲಿನ ಬ್ಯಾರಿಕೇಡ್ ಗಳನ್ನು ತೆಗೆದುಹಾಕುವುದಾಗಿ ಎರಡು ಪವಿತ್ರ ಮಸೀದಿಗಳ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿಯ ಮುಖ್ಯಸ್ಥ ಶೇಖ್ ಅಬ್ದುಲ್ ರಹಮಾನ್ ಅಲ್-ಸುದೈಸ್ ಘೋಷಿಸಿದ್ದಾರೆ.
ಈ ನಿರ್ಧಾರವು, ಹಜ್ ನಂತರದ ಹೊಸ ಉಮ್ರಾ ಋತುವಿನ ಆರಂಭದ ಸಂದರ್ಭದಲ್ಲಿ ಪವಿತ್ರ ಕಾಬಾವನ್ನು ಸಂದರ್ಶಿಸುವ ಯಾತ್ರಾರ್ಥಿಗಳಿಗೆ ಸುರಕ್ಷಿತ ಮತ್ತು ಭರವಸೆಯ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮ ಆಚರಣೆಗಳನ್ನು ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಅಲ್-ಸುದೈಸ್ ಹೇಳಿದ್ದಾರೆ.
ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ಈ ಆದೇಶವನ್ನು ಹೊರಡಿಸಿದ್ದು, ಈ ಮೂಲಕ ಹಜ್ ಮತ್ತು ಉಮ್ರಾ ಯಾತ್ರಿಕರು ಮತ್ತು ಸಂದರ್ಶಕರಿಗೆ ಕಾಬಾ ಮತ್ತು ಹಜರುಲ್ ಅಸ್ವದ್ ಅನ್ನು ಸ್ಪರ್ಶಿಸಲು ಅಥವಾ ಚುಂಬಿಸಲು ಅವಕಾಶದೊರೆತಂತಾಗಿದೆ.
ಕಅಬಾದ ಸುತ್ತಮುತ್ತಲಿನ ಪ್ರದೇಶವನ್ನು 2020 ರ ಮಾರ್ಚ್ ನಲ್ಲಿ ಕೊರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಯಾತ್ರಾರ್ಥಿಗಳ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಸ್ಥಾಪಿಸಲಾಗಿತ್ತು.