ಬೆಂಗಳೂರು,ಜು.28: ಎಂಬಿಬಿಎಸ್ ವಿದ್ಯಾರ್ಥಿ ಉಮೈದ್ ಅಹಮ್ಮದ್ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರೈಲ್ವೆ ಪೊಲೀಸರು ಹುಬ್ಬಳ್ಳಿಗೆ ತೆರಳಿ ಕುಟುಂಬದವರ ವಿಚಾರಣೆ ನಡೆಸಿದ್ದಾರೆ. ಸುಲ್ತಾನ್ ಪಾಳ್ಯ ನಿವಾಸಿಯಾಗಿದ್ದ ಉಮೈದ್, ರೈಲ್ವೆ ಇಲಾಖೆ ನಿವೃತ್ತ ಉದ್ಯೋಗಿಯೊಬ್ಬರ ಪುತ್ರನಾಗಿದ್ದು. ಕಸ್ತೂರಿನಗರ ಬಳಿಯ ರೈಲು ಹಳಿ ಮೇಲೆ ಜುಲೈ 26ರಂದು ಅವರ ಮೃತದೇಹ ಸಿಕ್ಕಿತ್ತು. ಕತ್ತಿನ ಮೇಲೆ ಗಾಯದ ಗುರುತು ಇರುವುದರಿಂದ ಕೊಲೆಯ ಶಂಕೆ ಮೂಡಿದ್ದು ಎಲ್ಲಾ ಅಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್ ಪಿ ಸಿರಿಗೌರಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಪ್ರತಿಷ್ಠಿತ ಮಹಾ ವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಉಮೈದ್, ಬಕ್ರೀದ್ ಹಬ್ಬಕ್ಕೆಂದು ಅರ್ ಟಿ ನಗರದ ಮನೆಗೆ ಬಂದಿದ್ದರು. ಹುಬ್ಬಳ್ಳಿಗೆ ಹೋಗುವುದಾಗಿ ಹೇಳಿ ಜುಲೈ 24ರಂದು ಮನೆ ಬಿಟ್ಟಿದ್ದರು. ಅದಾದ ನಂತರ ಅವರು ಹುಬ್ಬಳ್ಳಿಗೆ ಹೋಗಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಇದರ ನಡುವೆಯೇ ಮೃತದೇಹ ದೊರೆತಿತ್ತು.
ಉಮೈದ್ ಅವರು ಉಬರ್ ಕ್ಯಾಬ್ ನಲ್ಲಿ ಮನೆಯಿಂದ ಹೊರಟಿದ್ದರು. ಆದರೆ, ಅವರು ಎಲ್ಲಿ ಇಳಿದುಕೊಂಡರು ಎಂಬುದು ಗೊತ್ತಾಗಿಲ್ಲ. ಉಬರ್ ಕ್ಯಾಬ್ ಚಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗಿದ್ದು ಆತನ ಪಾತ್ರ ಇಲ್ಲದಿರುವುದು ಕಂಡುಬಂದಿದೆ.
ಉಮೈದ್ ಸಾವಿನಲ್ಲಿ ಹಲವು ಅನುಮಾನಗಳು ಇವೆ. ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ. ಉಮೈದ್ ಅವರ ಕರೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿರಿಗೌರಿ ತಿಳಿಸಿದ್ದಾರೆ.