ಮಜ್ದೂರ್ ಕಿಸಾನ್ ಸಂಘರ್ಷ ರ್‍ಯಾಲಿ; ದೇಶವ್ಯಾಪಿ ಸಿದ್ಧತೆ, ದಿಲ್ಲಿಯಲ್ಲಿ ಸ್ವಾಗತ ಸಮಿತಿ ರಚನೆ

Prasthutha|

ನವದೆಹಲಿ: ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯೂಯು ನೇತೃತ್ವದಲ್ಲಿ ಏಪ್ರಿಲ್ 5ರಂದು ನಡೆಯಲಿರುವ ಮಜ್ದೂರ್ ಕಿಸಾನ್ ಸಂಘರ್ಷ ರ್ಯಾ ಲಿಗೆ ದೇಶಾದ್ಯಂತ ಭಾರೀ ಸಿದ್ಧತೆ ನಡೆಯುತ್ತಿದೆ. ಜನವರಿಯಲ್ಲಿ ರಾಜ್ಯ ಮಟ್ಟದ ಜಂಟಿ ಸಮಾವೇಶಗಳ ನಂತರ ಜಿಲ್ಲಾ ಮಟ್ಟದ ಸಮಾವೇಶಗಳು 400 ಜಿಲ್ಲೆಗಳಲ್ಲಿ ನಡೆದಿವೆ. ನಂತರ ಜಾಥಾಗಳು, ಮೆರವಣಿಗೆಗಳು, ಧರಣಿಗಳಲ್ಲದೆ, ಸಾಂಸ್ಕೃತಿಕ ತಂಡಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರಾಂದೋಲನ ನಡೆಸಲಾಗುತ್ತಿದೆ. ಮನೆ-ಮನೆ ಪ್ರಚಾರದ ಮೂಲಕ 1 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಅದು ನೆರವೇರುತ್ತಿದೆ ಎಂದು ತಿಳಿದು ಬಂದಿದೆ.

- Advertisement -


ದಿಲ್ಲಿಯಲ್ಲಿ ಒಂದು ಸ್ವಾಗತ ಸಮಿತಿ ರಚನೆಗೊಂಡಿದ್ದು, ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಇದರ ಅಧ್ಯಕ್ಷರಾಗಿದ್ದಾರೆ. ಅಧ್ಯಯನಕಾರರು, ಕಲಾವಿದರು ಮತ್ತು ಎಲ್ಲ ರಂಗಗಳಲ್ಲಿನ ಸಕ್ರಿಯ ಕಾರ್ಯಕರ್ತರು ಈ ಸಮಿತಿಯಲ್ಲಿದ್ದಾರೆ.


ಮಾರ್ಚ್ 21ರಂದು ಈ ಮೂರು ಸಂಘಟನೆಗಳ ಕೇಂದ್ರೀಯ ಮುಖಂಡರೊಂದಿಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಪ್ರೊ. ಪ್ರಭಾತ್ ಪಟ್ನಾಯಕ್, ದೇಶದಲ್ಲಿ ನವ-ಉದಾರವಾದಿ ಆಳ್ವಿಕೆಯು ಕ್ರೂರ ದಾಳಿಯಿಂದಾಗಿ ಕಳೆದ ಎರಡು ದಶಕಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

- Advertisement -


ಪ್ರಸಕ್ತ ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಇದು ಇನ್ನಷ್ಟು ಗಂಭೀರ ಸ್ವರೂಪ ತಳೆದಿದೆ. ಈ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ಮೂರು ಕುಖ್ಯಾತ ಕೃಷಿ ಕಾಯ್ದೆಗಳ ಮೂಲಕ ಈ ದಾಳಿಗೆ ಸಾಂಸ್ಥಿಕ ಸ್ವರೂಪ ಕೊಡಲು ಪ್ರಯತ್ನಿಸುತ್ತಿದೆ. ರೈತರ ಧೀರ ಪ್ರತಿರೋಧದಿಂದಾಗಿ ಪ್ರಧಾನಿಗಳು ಸ್ವಲ್ಪ ಹಿಂದಕ್ಕೆ ಸರಿಯಬೇಕಾಗಿ ಬಂದಿದೆ, ಆದರೆ ಅದನ್ನು ಹೇರುವ ವಿಚಾರವನ್ನು ಆತ ಕೈಬಿಟ್ಟಿಲ್ಲ.
ದುಡಿಯುವ ಜನಗಳ ಮೇಲೆ ಈ ಕ್ರೂರ ದಾಳಿಗಳ ವಿರುದ್ಧ ಹೋರಾಡಲು, ಪ್ರಜಾಪ್ರಭುತ್ವದ ಮತ್ತು ಪ್ರತಿರೋಧದ ಹಕ್ಕಿನ ರಕ್ಷಣೆಗಾಗಿ ಮತ್ತು ಆಧುನಿಕ ಭಾರತದ ಅಡಿಗಲ್ಲಾದ ಜಾತ್ಯತೀತತೆ ಮತ್ತು ಸಂವಿಧಾನದ ರಕ್ಷಣೆಗೆ ಎಲ್ಲ ದುಡಿಮೆಗಾರರು ಒಂದು ವೇದಿಕೆಯ ಮೇಲೆ ಬರುವ ಅಗತ್ಯವಿದ್ದು, ಎಪ್ರಿಲ್ 5ರ ರ್ಯಾ ಲಿ ಈ ಪ್ರಕ್ರಿಯೆಯ ಆರಂಭದ ಸಂಕೇತ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ಹೇಳಿದ್ದಾರೆ.



Join Whatsapp