ಇಂಪಾಲ್: ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವಂತೆ ತಾನೇ ನೀಡಿದ್ದ ಆದೇಶವನ್ನು ಮಣಿಪುರ ಹೈಕೋರ್ಟ್ ಹಿಂಪಡೆದುಕೊಂಡಿದೆ.
ಮಣಿಪುರದಲ್ಲಿ ಭೀಕರ ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿ 200ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾದ ಆದೇಶವನ್ನು ವಿರೋಧಿಸಿ ಕುಕಿ ಸಮುದಾಯದವರು ದಂಗೆ ಎದ್ದಿದ್ದರು. ಆ ಬಳಿಕ ತಿಂಗಳಾನುಗಟ್ಟಲೆ ನಡೆದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
2023ರ ಮಾ.27ರಂದು ಅಂದಿನ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾ. ಎಂ.ವಿ. ಮುರಳೀಧರನ್ ಆದೇಶ ಹೊರಡಿಸಿ, ಮೈತೇಯಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮಣಿಪುರ ಸರ್ಕಾರಕ್ಕೆ ಸೂಚನೆ ನೀಡಿದ್ದರು.
ಈ ನಡುವೆ, ಈ ಆದೇಶ ರದ್ದತಿ ಕೋರಿ ಮಣಿಪುರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ. ಗೋಲಿ ಗೈಫುಲ್ಶಿಲ್ಲು, ಎಸ್ಸಿ -ಎಸ್ಟಿ ಪಟ್ಟಿಗೆ ಜಾತಿಗಳನ್ನು ಸೇರಿಸುವಂತೆ ಸೂಚನೆ ನೀಡುವ ಅಧಿಕಾರ ಕೋರ್ಟ್ಗಳಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈತೇಯಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವ ಆದೇಶವನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ.