ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ X ಪೋಸ್ಟಿಗೆ, ಇದು ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂತಿದ್ದೇನೆ ಎಂಬುದಾಗಿ ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಗಾರಿದ್ದಾರೆ.
ಎಕ್ಸ್ನಲ್ಲಿ ಪ್ರತಿ ಪೋಸ್ಟ್ ಮಾಡಿರುವ ಅಶೋಕ್, ಮುಖ್ಯಮಂತ್ರಿಗಳ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ. ಅದು ನನಗೆ ಬೇಡವೇ ಬೇಡ. ಆದರೆ ಜೂ.4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೋ? ಜೂ.4ರ ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೋ ನೋಡೋಣ ಎಂದು ತಿರುಗೇಟು ನೀಡಿದ್ದಾರೆ.
ನಾಲ್ಕು ಅಹಂಕಾರದ ಮಾತುಗಳು ಆಡಿದ ಮಾತ್ರಕ್ಕೆ ಪ್ರತಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ತಿಳಿದಿದ್ದರೆ, ಅದು ತಮ್ಮ ಭ್ರಮೆ. ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ, ಆಲ್ ದಿ ಬೆಸ್ಟ್ ಎಂದು ವ್ಯಂಗ್ಯವಾಡಿದ್ದಾರೆ.