ನವದೆಹಲಿ: ಇಸ್ಲಾಮೀ ವಿದ್ವಾಂಸ, ಜಮಾಅತೆ ಇಸ್ಲಾಮೀ ಹಿಂದ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಜಲಾಲುದ್ದೀನ್ ಉಮರಿ ಶುಕ್ರವಾರ ಸಂಜೆ 8.30 ರ ಸುಮಾರಿಗೆ ನವದೆಹಲಿಯ ಅಲ್ ಶಿಫಾ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಜಲಾಲುದ್ದೀನ್ ಉಮರಿ ಅವರು 1935ರಲ್ಲಿ ಬ್ರಿಟಿಷ್ ಇಂಡಿಯಾ ಭಾಗವಾಗಿದ್ದ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಪುಟ್ಟಗ್ರಾಮ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರು ತಮಿಳುನಾಡಿನ ಉಮರಾಬಾದ್‌ನ ಜಾಮಿಯಾ ದಾರುಸ್ಸಲಾಮ್‌ನಲ್ಲಿ ಪದವೀಧರರಾಗಿದ್ದಾರೆ.
ಜಾಮಿಯಾ ದಾರುಸ್ಸಲಾಮ್‌ನಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಉಮರಿ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು.
ಜಲಾಲುದ್ದೀನ್ ಉಮರಿ ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಜಮಾತ್-ಎ-ಇಸ್ಲಾಮಿ ಹಿಂದ್‌ನೊಂದಿಗೆ ತನ್ನ ಒಡನಾಟವನ್ನು ಪ್ರಾರಂಭಿಸಿದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಅದರ ಸಂಶೋಧನಾ ವಿಭಾಗದಲ್ಲಿ ತೊಡಗಿಸಿಕೊಂಡಿದ್ದರು.
1956ರಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಅಧಿಕೃತವಾಗಿ ಸದಸ್ಯರಾದ ಅವರು, ಅಲಿಘರ್‌ನ ಜಮಾಅತ್‌ನ ನಗರ ಅಮೀರ್ ಆಗಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದರು ಮತ್ತು ಐದು ವರ್ಷಗಳ ಕಾಲ ಅದರ ಮಾಸಿಕ ಜಿಂದಗಿ-ಎ-ನೌ ಸಂಪಾದಕರಾಗಿ ಸೇವೆ ಸಲ್ಲಿಸಿದರು. ನಂತರ, ಜಮಾಅತ್ ಅವರನ್ನು ಅದರ ಅಖಿಲ-ಭಾರತದ ಉಪ ಅಮೀರ್‌ಗೆ ಆಯ್ಕೆ ಮಾಡಿತು.
ಸತತ ನಾಲ್ಕು ಅವಧಿಗೆ (ಹದಿನಾರು ವರ್ಷಗಳು) ಸೇವೆ ಸಲ್ಲಿಸಿದರು. 2007ರಲ್ಲಿ, ಜಮಾಅತ್‌ನ ಸೆಂಟ್ರಲ್ ಕೌನ್ಸಿಲ್ ಆಫ್ ರೆಪ್ರೆಸೆಂಟೇಟಿವ್ಸ್ ಅವರನ್ನು ತನ್ನ ಅಮೀರ್ (ಮುಖ್ಯಸ್ಥ) ಆಗಿ ಆಯ್ಕೆ ಮಾಡಿತು. ಅವರು 2011ರಲ್ಲಿ ಜಮಾಅತ್‌ನ ಅಮೀರ್ ಆಗಿ ಪುನಃ ಆಯ್ಕೆಯಾದರು. ಜಲಾಲುದ್ದೀನ್ ಉಮರಿ ಅವರು ನಾಲ್ಕನೇ ಅವಧಿಗೆ ಜಮಾಅತೆ ಇಸ್ಲಾಮಿ ಹಿಂದ್ ನ(ಏಪ್ರಿಲ್ 2015 – ಮಾರ್ಚ್ 2019) ಅಮೀರ್ ಆಗಿ ಆಯ್ಕೆಯಾಗಿದ್ದರು.
ಭಾರತದ ಇಸ್ಲಾಮಿಕ್ ಪಂಡಿತರ ಪೈಕಿ ಜಲಾಲುದ್ದೀನ್ ಉಮರಿ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಉರ್ದು ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವ ಇವರು, ನಂತರ ವಿವಿಧ ಭಾಷೆಗಳಲ್ಲಿ ಅವುಗಳನ್ನು ಅನುವಾದಿಸಿದ್ದರು.