ಬೆಂಗಳೂರು: ಮರಣಕೂಪವಾಗಿರುವ ಗುಂಡಿಗಳು, ವಾಹನ ಸವಾರರ ನರಕ ಯಾತನೆ ಸೇರಿದಂತೆ ಬಿಬಿಎಂಪಿಯ ದುರಾಳಿತದ ವಿರುದ್ಧ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನವೆಂಬರ್ 3 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಡಾ. ಬಿ.ಟಿ. ಲಲಿತಾ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಹಿಂದೆಂಡೂ ಕಂಡರಿಯದ ರೀತಿಯಲ್ಲಿ ಹಾಳಾಗಿವೆ. ಜನ ಜೀವವನ್ನು ಪಣಕ್ಕಿಟ್ಟು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಆಯುಕ್ತರು ಬಿಬಿಎಂಪಿಯ ಎಲ್ಲಾ ರಸ್ತೆಗಳ ಗುಣಮಟ್ಟದ ಪರಿಶೀಲನಾ ಪ್ರಮಾಣ ಪತ್ರಗಳನ್ನು ಎಂಜಿನಿಯರ್ ಗಳ ಮೂಲಕ ನಮಗೆ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಬಿಬಿಎಂಪಿ ಕಮೀಷನರ್, ರಸ್ತೆ ಕಾಮಗಾರಿ ಪಡೆದ ಗುತ್ತಿಗೆದಾರರು, ಇಂಜಿನಿಯರ್ ಗಳ ಮೇಲೂ ಸಹ ಎಫ್.ಐ.ಆರ್. ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ಬಿಬಿಎಂಪಿ ಸೇರಿದಂತೆ ರಾಜ್ಯದೆಲ್ಲೆಡೆ ರಸ್ತೆಗಳು ಸರ್ವನಾಶವಾಗಿವೆ. ಗುಂಡಿ ಬಿದ್ದು ಪ್ರತಿನಿತ್ಯ ಜನತೆ ಜೀವನ್ಮರಣದ ಜೊತೆ ಹೋರಾಡುವಂತಾಗಿದೆ. ಗುಣಮಟ್ಟದ ರಸ್ತೆ ಕಾಮಗಾರಿಯಿಂದ ರಸ್ತೆಗಳು ಹಾಳಾಗುವುದಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಬಹುತೇಕ ರಸ್ತೆಗಳು ತೂತು ಬಿದ್ದಿವೆ. ರಸ್ತೆಗಳು ಹಳ್ಳಕೊಳ್ಳವಾಗಿವೆ. ಗುತ್ತಿಗೆದಾರರಿಂದ ಶೇ 40 ರಷ್ಟು ಕಮೀಷನ್ ಪಡೆದ ಕಾರಣದಿಂದಲೇ ಇಂತಹ ಸಮಸ್ಯೆ ತಲೆದೋರುತ್ತಿದೆ. ಕಾಮಗಾರಿಗಾಗಿ ಮಂಜೂರಾಗುವ ಹಣ ಪೂರ್ಣ ಪ್ರಮಾಣದಲ್ಲಿ ಮತ್ತು ಪ್ರಾಮಾಣಿಕವಾಗಿ ಬಳಕೆಯಾಗದೆ ಇರುವ ಕಾರಣ ಇಂತಹ ಸಮಸ್ಯೆ ತಲೆದೋರಿದೆ ಎಂದು ಡಾ. ಬಿ.ಟಿ. ಲಲಿತಾ ನಾಯಕ್ ಆರೋಪಿಸಿದರು.
ಆಡಳಿತ ಪಕ್ಷದ ಪ್ರಮುಖರಿಂದ ಹಿಡಿದು ಗುತ್ತಿಗೆದಾರನವರೆಗೂ ಹಣ ಕಬಳಿಸುವುದರಲ್ಲೇ ನಿರತರಾಗಿರುವುದರಿಂದ ರಸ್ತೆಗಳು ತಿಂಗಳೊಪ್ಪತ್ತಿನಲ್ಲೇ ಗುಂಡಿ ಬಿದ್ದು ಕೊಚ್ಚಿ ಹೋಗಿ ಜನ ರಸ್ತೆಗಾಗಿ ಹುಡುಕಾಟ ನಡೆಸುವಂತಾಗಿದೆ. ಇದನ್ನು ಸರಿಪಡಿಸಲು ಸರ್ಕಾರ ಲಂಚಕೋರ ಗುತ್ತಿಗೆದಾರು, ಕಳಪೆ ಕಾಮಗಾರಿಗೆ ಕಾರಣರಾದ ಆಯಾ ವಿಭಾಗದ ಉಸ್ತುವಾರಿ ನೋಡಿಕೊಳ್ಳುವ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರು, ಇಂಜಿನಿಯರ್ ಮತ್ತು ಜನಪ್ರತಿನಿಧಿಗಳ ಮೇಲೆ ಕಾನೂನು ಹೋರಾಟಕ್ಕೆ ಪಕ್ಷ ಮುಂದಾಗಲಿದೆ ಎಂದು ಹೇಳೀದರು.
ಜನತಾಪಾರ್ಟಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ ಎನ್ ಗೋಪಾಲಕೃಷ್ಣ, ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಮಹಿಳಾ ಘಟಕದ ಅಧ್ಯಕ್ಷರಾದ ಸ್ನೇಹ ಎಂ, ಕೋರ್ ಕಮಿಟಿ ಸದಸ್ಯ ಅಬ್ದುಲ್ ಬಶೀರ್, ಉಪಾಧ್ಯಕ್ಷ ಭೋಜ ರಾಜ್ ಮತ್ತಿತರು ಪಾಲ್ಗೊಂಡಿದ್ದರು.