ಮ್ಯಾಂಚೆಸ್ಟರ್: ಅತ್ಯಾಚಾರದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ ಮೇಸನ್ ಗ್ರೀನ್‌ವುಡ್‌ರನ್ನು ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಗ್ರೀನ್‌ವುಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ನವೆಂಬರ್ 21ರ ವರೆಗೆ ರಿಮಾಂಡ್‌ಗೆ ಒಪ್ಪಿಸಿದೆ.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುನೈಟೆಡ್ ಆಟಗಾರ ಗ್ರೀನ್‌ವುಡ್‌ರನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಶನಿವಾರ ಬಂಧಿಸಿದ್ದರು. ಸೋಮವಾರ ಆಟಗಾರನನ್ನು ಮ್ಯಾಂಚೆಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ಯುವತಿಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪ ಹಿಒತ್ತಿರುವ ಯುವ ಆಟಗಾರನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಲಯ ತಿಳಿಸಿತು. ಮೇಸನ್ ಗ್ರೀನ್‌ವುಡ್, ನವೆಂಬರ್ 21 ರಂದು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ಗೆ ಹಾಜರಾಗಲಿದ್ದಾರೆ.
21 ವರ್ಷದ ಮೇಸನ್ ಗ್ರೀನ್‌ವುಡ್‌ನನ್ನು, ಮೊದಲ ಬಾರಿ ಜನವರಿಯಲ್ಲಿ ಬಂಧಿಸಲಾಗಿತ್ತು. ಯುವತಿಯ ಜೊತೆಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ಗ್ರೀನ್‌ವುಡ್, ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ. ಬಳಿಕ ಯುವತಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಯುವ ಆಟಗಾರನನ್ನು ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಆ ಬಳಿಕ ಗ್ರೀನ್‌ವುಡ್‌ಗೆ ಜಾಮೀನು ಸಿಕ್ಕಿತ್ತು.
ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಗ್ರೀನ್‌ವುಡ್, ಏಕೈಕ ಪಂದ್ಯವನ್ನಾಡಿದ್ದಾರೆ. ವರ್ಷಾರಂಭದಲ್ಲಿ ಯುವ ಆಟಗಾರನ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಯುನೈಟೆಡ್ ತಂಡದ ಜೊತೆಗೆ ತರಬೇತಿ ಪಡೆಯುವುದರಿಂದಲೂ ಅಮಾನತುಗೊಂಡರು. ಇದರ ಬೆನ್ನಲ್ಲೇ , ನೈಕ್ ಸಂಸ್ಥೆಯು ಗ್ರೀನ್‌ವುಡ್ ಅವರೊಂದಿಗಿನ ಪ್ರಾಯೋಜಕತ್ವದ ಒಪ್ಪಂದವನ್ನು ಕೊನೆಗೊಳಿಸಿತ್ತು.