ಹೊಸದಿಲ್ಲಿ: ಇನ್ನು ಮುಂದೆ ದೇಶದ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಕಟ್ಟುನಿಟ್ಟಿನ ನಿಯಮವನ್ನು ಹೊರಡಿಸಿದೆ.
ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಕಠಿಣ ನಿಯಮಗಳನ್ನು ಡಿಜಿಸಿಎ ಜಾರಿ ಮಾಡಬೇಕು ಎಂದು ದಿಲ್ಲಿ ಹೈಕೋರ್ಟ್ ಜೂ. 3ರಂದು ಆದೇಶಿಸಿದ ಬೆನ್ನಲ್ಲೇ ಈ ನಿಯಮಗಳನ್ನು ಹೇರಲಾಗಿದೆ.
ಕೊರೊನಾ ಕಡಿಮೆಯಾಯಿತೆಂದು ಮಾಸ್ಕ್ ಇಲ್ಲದೆಯೇ ವಿಮಾನ ಪ್ರಯಾಣ ಮಾಡುವ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸ ಬಹುದು, ಮಾಸ್ಕ್ ಧರಿಸಲು ಹಠ ಮಾಡುವ ಪ್ರಯಾಣಿಕರ ಧೋರಣೆ ಯನ್ನು ಅಶಿಸ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬಹುದು ಎಂದು ಸೂಚನೆ ಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಪಡೆಗಳ ಸಹಾಯದೊಂದಿಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಬಹುದು ಅಥವಾ ಅವರನ್ನು ಹೆಚ್ಚಿನ ಕ್ರಮಕ್ಕಾಗಿ ರಕ್ಷಣಾ ಪಡೆಗೆ ಒಪ್ಪಿಸಬಹುದು ಎಂದೂ ನಿರ್ದೇಶನಾಲಯ ತಿಳಿಸಿದೆ.