ಮಂಗಳೂರು: ಇತ್ತೀಚೆಗೆ ಕುಸಿತ ಕಂಡ ಇಲ್ಲಿನ ಮರವೂರು ಸೇತುವೆಯ ಪಿಲ್ಲರ್, ಸ್ಲ್ಯಾಬ್ ಮೇಲಕ್ಕೆತ್ತುವ ದುರಸ್ತಿ ಕಾರ್ಯ ನಡೆಯುತ್ತಿದೆ. ಸದ್ಯ ಸೇತುವೆಯನ್ನು ಯಥಾಸ್ಥಿತಿಗೆ ತರಲಾಗಿದ್ದು, ಉಳಿದ ಸುರಕ್ಷಾ ಕ್ರಮಗಳನ್ನು 2 ವಾರದೊಳಗೆ ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಫಲ್ಗುಣಿ ನದಿಯಲ್ಲಿ ಹರಿವಿನ ಮಟ್ಟ ಏರಿಕೆಯಾಗಿದೆ. ಸೇತುವೆ ಬಿರುಕು ಬಿಟ್ಟಿರುವ ಪಿಲ್ಲರ್ ಭಾಗದಲ್ಲಿ ನದಿ ತಳದಿಂದ ಜ್ಯಾಕ್ ಮಾದರಿಯಲ್ಲಿ ಆಧಾರ ಕೊಡಲಾಗುತ್ತಿದೆ. ಪ್ರವಾಹದ ಪರಿಸ್ಥಿತಿಯಲ್ಲೂ ಬೆಂಗಳೂರು ಮತ್ತು ಕೇರಳದ ತಂತ್ರಜ್ಞರ ಸಲಹೆ ಪಡೆದು ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಲ್ಯಾಬ್ ಮೇಲಕ್ಕೆತ್ತುವ ಕಾಮಗಾರಿ ಗುರುವಾರ ರಾತ್ರಿ ಆರಂಭವಾಗಿದ್ದು ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಪೂರ್ಣಗೊಂಡಿದೆ.
ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗವು ಗುತ್ತಿಗೆದಾರ ಸಂಸ್ಥೆ ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ನ ಮೂಲಕ ಕಾಮಗಾರಿಯನ್ನು ನಿರ್ವಹಿಸಿದೆ ಎಂದು ಪಿಡಬ್ಯು ಡಿ ಅಧಿಕಾರಿಗಳು ತಿಳಿಸಿದ್ದಾರೆ. ಪಿಲ್ಲರ್ ಭದ್ರತೆಯ ಬಳಿಕ ಕ್ಯೂರಿಂಗ್ ಕಾರ್ಯ ಆಗಬೇಕಾಗಿದೆ. 2 ವಾರಗಳಲ್ಲಿ ಇನ್ನುಳಿದ ಸುರಕ್ಷಾ ಕ್ರಮಗಳನ್ನು ನಿರ್ವಹಿಸಿ ಲೋಡ್ ಟೆಸ್ಟಿಂಗ್ ಮಾಡಿ ದೃಢಪಡಿಸಿಕೊಂಡ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಯು ಡಿ ಅಧಿಕಾರಿಗಳು ತಿಳಿಸಿದ್ದಾರೆ