ಬೆಂಗಳೂರು: ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಯಿಂದ ಆಶ್ರಯ ಕೋರಿ ಬೆಂಗಳೂರಿಗೆ ಬಂದು ಸೆಂಟ್ ತೆರೇಸಾ ಶಿಕ್ಷಣ ಸಂಸ್ಥೆ ಯಲ್ಲಿ ಉಳಿದುಕೊಂಡಿರುವ 29 ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ದತ್ತು ಪಡೆದಿದ್ದಾರೆ.
ಚಾಮರಾಜ ಪೇಟೆಯ ಸೆಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಮಣಿಪುರ ಸಂತ್ರಸ್ತರ ಜತೆ ಹುಟ್ಟು ಹಬ್ಬ ಆಚರಿಸಿಕೊಂಡ ಬಳಿಕ ಮಾತನಾಡಿದ ಝಮೀರ್ ಅಹಮದ್ ಖಾನ್, ಮಣಿಪುರ ಸಂತ್ರಸ್ಥ ವಿದ್ಯಾರ್ಥಿಗಳು ಎಲ್ಲಿಯವರೆಗೆ ಇಲ್ಲಿರುತ್ತಾರೋ ಅಲ್ಲಿವರೆಗೆ ಸಂಪೂರ್ಣ ಶಿಕ್ಷಣ ಮತ್ತು ದೈನಂದಿನ ಊಟ ತಿಂಡಿ ಆರೈಕೆ ವ್ಯವಸ್ಥೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇಲ್ಲಿ ಸುರಕ್ಷಿತ ವಾಗಿರಿ ನಿಮಗೆ ಏನೇ ಬೇಕಾದರೂ ನಾನೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು 29 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದು, ಉಳಿದವರಿಗೆ ಇದೇ ಸಂಸ್ಥೆಯಡಿಯಲ್ಲಿರುವ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವಿದ್ಯಾರ್ಥಿಗಳು ಏಳು ವರ್ಷ ಇಲ್ಲೇ ವಿದ್ಯಾಭ್ಯಾಸ ಪಡೆಯಲಿದ್ದಾರೆ.