ಆಸ್ಪತ್ರೆಗೆ ತೆರಳುತ್ತಿದ್ದ ಅಂಬುಲೆನ್ಸ್‌ಗೆ ಬೆಂಕಿಯಿಟ್ಟ ದುಷ್ಕರ್ಮಿಗಳು : 8ರ ಬಾಲಕ, ತಾಯಿ ಮೃತ್ಯು

Prasthutha|

ಗುವಾಹಟಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ದ್ವೇಷ, ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ತಲೆಗೆ ಗುಂಡೇಟು ಬಿದ್ದು ಗಾಯಗೊಂಡಿದ್ದ 8 ವರ್ಷದ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದುಷ್ಕರ್ಮಿಗಳ ಗುಂಪೊಂದು ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿದೆ. ಇದರಿಂದ ಬಾಲಕ ಮತ್ತು ಆತನ ತಾಯಿ ಮೃತಪಟ್ಟಿರುವ ಘಟನೆ ನಡೆದಿದೆ.

- Advertisement -

ಲ್ಯಾಂಫೆಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂಫಾಲ್ ಪಶ್ಚಿಮದ ಇರೊಸೆಂಬಾ ಪ್ರದೇಶದಲ್ಲಿ ಭಾನುವಾರ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಲಾಗಿದೆ. 8 ವರ್ಷದ ಬಾಲಕ ಟೋನ್ಸಿಂಗ್ ಹ್ಯಾಂಗ್ಸಿಂಗ್, ಬಾಲಕನ ತಾಯಿ ಮೀನಾ ಹ್ಯಾಂಗ್ಸಿಂಗ್ ಮತ್ತು ಅವರ ಸಂಬಂಧಿ ಲಿಡಿಯಾ ಲೌರೆಂಬಮ್ ಮೃತರು ಎಂದು ಗುರುತಿಸಲಾಗಿದೆ.

ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆ ವಿರೋಧಿಸಿ ಮೇ 3 ರಂದು ಗುಡ್ಡಗಾಡು ಜಿಲ್ಲೆಗಳಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಇದಾದ ನಂತರ ಮಣಿಪುರದಲ್ಲಿ ಘರ್ಷಣೆ ಭುಗಿಲೆದ್ದಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದೆ.

- Advertisement -

ಅಂಬುಲೆನ್ಸ್‌ ಬೆಂಕಿ ದುರಂತದಲ್ಲಿ ಮೃತಪಟ್ಟ ಮಹಿಳೆ ಮೈತೇಯಿ ಸಮುದಾಯಕ್ಕೆ ಸೇರಿದವರು. ಆಕೆ ಮದುವೆಯಾಗಿರುವ ವ್ಯಕ್ತಿ ಕುಕಿ ಸಮುದಾಯಕ್ಕೆ ಸೇರಿದಾತ. ಇವರಿಗೆ 8 ವರ್ಷ ವಯಸ್ಸಿನ ಮಗನಿದ್ದ. ಈ ದಂಪತಿ ಮಗ ಕಾಂಗ್‌ಚುಪ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದ. ಶಿಬಿರದಲ್ಲಿ ಮತ್ತು ಸುತ್ತಮುತ್ತ ಭದ್ರತೆ ಬಲಪಡಿಸಲಾಗಿತ್ತು. ಆದರೆ ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದು ಬಾಲಕನ ತಲೆಗೆ ಬುಲೆಟ್‌ ಹೊಕ್ಕಿ ಗಾಯಗೊಂಡಿದ್ದ.

ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು ತಕ್ಷಣವೇ ಇಂಫಾಲ್‌ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಅಂಬುಲೆನ್ಸ್‌ ವ್ಯವಸ್ಥೆ ಮಾಡಿದರು. ತಾಯಿ ಬಹುಸಂಖ್ಯಾತ ಸಮುದಾಯದವಳಾಗಿದ್ದರಿಂದ ಬಾಲಕನನ್ನು ರಸ್ತೆಯ ಮೂಲಕ ಇಂಫಾಲ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಐಸೊಸೆಂಬಾದಲ್ಲಿ ದುಷ್ಕರ್ಮಿಗಳು ಅಂಬುಲೆನ್ಸ್‌ನ್ನು ಸುಟ್ಟು ಹಾಕಿದ್ದು, ವಾಹನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂಸಾಚಾರ ನಿಯಂತ್ರಣಕ್ಕೆ ಸ್ಥಳೀಯ ಆಡಳಿತವು ಐದು ದಿನಗಳವರೆಗೆ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಿದೆ. ರಾಜ್ಯದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ ಮೇ 3 ರಿಂದ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ.

Join Whatsapp