ಮಂಗಳೂರು: ಹಚ್ಚ ಹಸುರಿನ ನಗರ ಎಂದೇ ಹೆಸರಾಗಿರುವ ಮಂಗಳೂರಿನಲ್ಲೂ ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್ ಪೀಸ್ ಸಂಶೋಧನ ವರದಿ ರವಾನಿಸಿದೆ.
ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ.
ಈ ಕೂಡಲೇ ವಾಯು ಮಾಲಿನ್ಯವನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಆರೋಗ್ಯದ ಮೇಲೆ ಅದು ತೀವ್ರ ದುಷ್ಪರಿಣಾಮ ಬೀರಬಲ್ಲದು ಎಂದು ವರದಿ ಎಚ್ಚರಿಸಿದೆ.
ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು ಸಹಿತ ಐದು ನಗರಗಳಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಾಗಿದೆ ಎಂಬುದನ್ನು ವರದಿಯು ದೃಢಪಡಿಸಿದೆ.