ಮಂಗಳೂರು: ದೇಶದಲ್ಲಿ ಅಡುಗೆ ಅನಿಲ, ಇಂಧನ, ವಿದ್ಯುತ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ವಿಮೆನ್ ಇಂಡಿಯಾ ಮೂವ್ ಮೆಂಟ್(WIM) ಕಾರ್ಯಕರ್ತರು ಬುಧವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಮ್ ಬಂಟ್ವಾಳ ವಿಧಾನಸಭಾ ಸಭಾ ಕ್ಷೇತ್ರದ ಅಧ್ಯಕ್ಷೆ ಶಾಕಿರ ಬಾನು, ಆಡಳಿತ ಪಕ್ಷವು ಬೆಲೆ ಏರಿಕೆ ಸಹಿತ ವಿವಿಧ ವೈಫಲ್ಯವನ್ನು ಮುಚ್ಚಿ ಹಾಕಲು ಶೋಷಿತರ ಮೇಲೆ ಜನಾಂಗೀಯ ವಾದವನ್ನು ಪ್ರಚೋದಿಸಿ ಗಲಭೆಗೆ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಅಡುಗೆ ಸಹಿತ ದಿನಬಳಕೆಯ ಸಾಮಗ್ರಿಗಳ ಬೆಲೆಯು ಗಗನಕ್ಕೇರುತ್ತಿದ್ದು ಮಹಿಳೆಯರು ಇದರ ನೇರ ಬಲಿಪಶುಗಳಾಗುತ್ತಿದ್ದಾರೆ. ಇದು ಸರಕಾರದ ಮಹಿಳಾ ವಿರೋಧಿ ಧೋರಣೆಯನ್ನು ಸಾಬೀತುಪಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಮುಂದುವರೆದರೆ ಮಹಿಳಾ ಅಪೌಷ್ಟಿಕತೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಮಹಿಳೆಯರ ಪರಿಸ್ಥಿತಿ ಇನ್ನಷ್ಟು ಹದೆಗಡಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರಕಾರವು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸರಕಾರವು ತಕ್ಷಣವೇ ಬೆಲೆಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ ಅವರು, ಲಾಕ್ ಡೌನ್ ನಿಂದಾಗಿ ಹದಗೆಟ್ಟಿರುವ ಜನಸಾಮಾನ್ಯರಿಗೆ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್, ಸಂಸದೆ ಶೋಭ ಕರಂದ್ಲಾಜೆ, ಬಾಬಾ ರಾಮ್ ದೇವ್ ಮುಖವಾಡ ಧರಿಸಿ ಸರಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, SDPI ದ.ಕ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಮತ್ತಿತರರು ಭಾಗಹಿಸಿದ್ದರು.