ಮಂಗಳೂರು: ಕಾರಾಗೃಹದಲ್ಲಿ ಖೈದಿಗಳ ನಡುವೆ ಮಾರಾಮಾರಿ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಇಬ್ಬರು ವಿಚಾರಣಾಧೀನ ಖೈದಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(3) ಮತ್ತು ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ (30) ದಾಳಿಗೊಳಗಾಗಿ ಗಾಯಗೊಂಡವರು ಎನ್ನಲಾಗಿದೆ.
ದಾಳಿಗೊಳಗಾದ ಇಬ್ಬರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅಡುಗೆ ಮನೆಯಲ್ಲಿದ್ದ ಚೂಪಾದ ವಸ್ತುಗಳಿಂದ ಹಲ್ಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲ್ಲೆಗೊಳಗಾದ ಖೈದಿಗಳಿಬ್ಬರು ಕಳೆದ 20 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಪ್ರತಿಸ್ಪರ್ಧಿ ಗ್ಯಾಂಗ್ ನ ಟೋಪಿ ನೌಫಲ್ ಮತ್ತು ಇತರ 10 ಸದಸ್ಯರು ಇವರಿಬ್ಬರ ಮೇಲೆ ದಾಳಿ ನಡೆಸಿದ್ದಾರೆ. ಸಂಜೆ 6:30 ರಿಂದ 6:45 ರ ನಡುವೆ ಖೈದಿಗಳ ಮೇಲೆ ಹಲ್ಲೆ ನಡೆದಿದೆ.
ಮುಫದ್ ರಿಫಾತ್ (28) ಮುಹಮ್ಮದ್ ರಿಜ್ವಾನ್(34),ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಮತ್ತು ಇತರರು ದಾಳಿ ನಡೆಸಿದ ಆರೋಪಿ ಖೈದಿಗಳು ಎಂದು ಪೊಲೀಸರು ತಿಳಿಸಿದ್ದಾರೆ.