ಮಂಗಳೂರು: ಮುಸ್ಲಿಮ್ ವ್ಯಕ್ತಿಗೆ ಬಸ್’ನಿಂದ ಇಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ಮಂಗಳೂರು: ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. 

- Advertisement -

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಮುಲ್ಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ಇಸಾಕ್ ಅವರು ಬುಧವಾರ ಬೆಳಗ್ಗೆ ಬಿ.ಸಿ.ರೋಡ್’ನಿಂದ ಮೂಡಬಿದ್ರೆಗೆ ಹೋಗಲು ‘ಮಹಾ ಗಣೇಶ’ ಎಂಬ ಖಾಸಗಿ ಬಸ್  ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಬಸ್ ಹತ್ತಿದ್ದರಿಂದ ವಿಪರೀತ ಪ್ರಯಾಣಿಕ ದಟ್ಟಣೆ ಉಂಟಾಗಿದೆ. ಇಸಾಕ್ ಅವರು ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸಾಕ್ ಅವರಿಗೆ ನೀಡಿದ್ದಾರೆ. ಅವರ ಮನವಿಯಂತೆ ಇಸಾಕ್ ಬ್ಯಾಗ್ ತೆಗೆದುಕೊಂಡಿದ್ದು, ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸಾಕ್ ಅವರಿಂದ ಬ್ಯಾಗ್ ಪಡೆದು ಬಸ್ ‘ನಿಂದ ಇಳಿದಿದ್ದಾರೆ ಎನ್ನಲಾಗಿದೆ.

- Advertisement -

ಇದಾದ ಸ್ವಲ್ಪ ಹೊತ್ತಿನಲ್ಲೇ ಬಸ್ ಕಂಡೆಕ್ಟರ್, ಇಸಾಕ್ ಅವರ ಬಳಿ ಬಂದು ತಗಾದೆ ತೆಗೆದು, ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ, ಮಹಿಳೆಯ ಮೈ ಮುಟ್ಟಿದ್ದೀರಿ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಮಾತ್ರವಲ್ಲ ಬಸ್ ನಿಲ್ಲಿಸಿ ಇಸಾಕ್ ಅವರನ್ನು ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಈ ಮಧ್ಯೆ ಕೆಲವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಆ ಗುಂಪಿಗೆ ಇಸಾಕ್ ಅವರನ್ನು ಹಸ್ತಾಂತರಿಸಿ ಬಸ್ ಕಂಡೆಕ್ಟರ್ ಬಸ್’ನೊಂದಿಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಸಂಘಪರಿವಾರಕ್ಕೆ ಸೇರಿದ ಆ ಗುಂಪು ಇಸಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ನಿರಂತರವಾಗಿ ಹಲ್ಲೆ ನಡೆಸಿದ್ದರಿಂದ ಇಸಾಕ್ ತೀವ್ರ ಅಸ್ವಸ್ಥರಾಗಿದ್ದಾರೆ. ಇದನ್ನು ಕಂಡ  ಸಂಘಪರಿವಾರದ ಕಾರ್ಯಕರ್ತರು ಬಳಿಕ ಇಸಾಕ್ ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ  ಆಗಮಿಸಿದ ಪೊಲೀಸರು ಇಸಾಕ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆಯಿಂದ ಇಸಾಕ್ ಅವರ ಬೆನ್ನು ಕೈ ಕಾಲುಗಳಲ್ಲಿ ತೀವ್ರವಾದ ಬಾಸುಂಡೆ ಎದ್ದಿದೆ. ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತೀವ್ರ ನೋವು ಇದ್ದರೂ ವೈದ್ಯರಲ್ಲಿ ಅದನ್ನು ತೋರಿಸದಂತೆ ಪೊಲೀಸರು ಇಸಾಕ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವೈದ್ಯರು ಕೂಡ ಇಸಾಕ್ ಅವರ ಅಂಗಿ ತೆಗೆದು ಪರಿಶೀಲನೆ ನಡೆಸಿಲ್ಲ. ಕೇವಲ ರಕ್ತದೊತ್ತಡ ಪರೀಕ್ಷೆ ಮಾಡಿ ಇಸಾಕ್ ಅವರನ್ನು ಪೊಲೀಸರು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಇಸಾಕ್ ಅವರ ಕುಟುಂಬದವರು ಠಾಣೆಗೆ ಬಂದಿದ್ದು, ಸಂಜೆ 5.30ರವರೆಗೆ ಇಸಾಕ್ ಅವರನ್ನು ಠಾಣೆಯಲ್ಲೇ ಕೂರಿಸಲಾಗಿತ್ತು. ಬಳಿಕ ಇಸಾಕ್ ಅವರಿಂದ ಹೇಳಿಕೆ ಪಡೆದು ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಕುಟುಂಬ ಮನವಿ ಮಾಡಿದಾಗ, ಹಾಗೆ ಮಾಡಲು ನಮಗೆ ಮುಕ್ತ ಸ್ವಾತಂತ್ರ್ಯವಿಲ್ಲ ಎಂದು ಬಂಟ್ವಾಳ ಠಾಣೆ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

ಸಂತ್ರಸ್ತ ಕುಟುಂಬ ಆತಂಕದಲ್ಲಿದ್ದು, ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

Join Whatsapp