ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಅನೈತಿಕ ಪೊಲೀಸ್ ಗಿರಿ ಮಿತಿಮೀರಿದ್ದು, ಮಂಗಳೂರಿನಲ್ಲಿ ನಡೆಯುವ ನ್ಯೂ ಇಯರ್ ಪಾರ್ಟಿಗಳಿಗೆ ಮುಸ್ಲಿಂ ಯುವಕರಿಗೆ ಪ್ರವೇಶ ಕೊಡಬಾರದು ಎಂದು ಪಾರ್ಟಿ ಆಯೋಜಕರಿಗೆ ಬಜರಂಗದಳ ಎಚ್ಚರಿಕೆ ನೀಡಿದೆ.
ನ್ಯೂ ಇಯರ್ ಪಾರ್ಟಿ ನಿಲ್ಲಿಸಲು ಬಜರಂಗದಳದಿಂದ ಮಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ನ್ಯೂ ಇಯರ್ ಹೆಸರಲ್ಲಿ ಪಬ್, ಹೊಟೇಲ್, ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುವ ಪಾರ್ಟಿಗಳ ಬಗ್ಗೆ ಬಜರಂಗದಳ ಕಿಡಿ ಕಾರಿದೆ. ಮಂಗಳೂರಿನ ಪಬ್ ಗಳಿಗೆ ಮುಸ್ಲಿಂ ಯುವಕರು ಬರುತ್ತಿದ್ದು, ಇದರ ಹಿಂದೆ ದುಷ್ಕೃತ್ಯದ ಸಂಚಿದೆ, ಡ್ರಗ್ಸ್ ಜಿಹಾದ್ ಮತ್ತು ಸೆಕ್ಸ್ ಜಿಹಾದ್ ಇದೆ. ಹೀಗಾಗಿ ನ್ಯೂ ಇಯರ್ ನ ಎಲ್ಲಾ ಪಾರ್ಟಿ ಬಂದ್ ಮಾಡಬೇಕು. ನಮ್ಮನ್ನ ಹತ್ತಿಕ್ಕಲು 107 ಕೇಸ್ ಹಾಕುವ ಕೆಲಸ ಪೊಲೀಸರು ಮಾಡಿದ್ದಾರೆ. ಆದರೆ ಲವ್ ಜಿಹಾದ್ ಮುಕ್ತ ಮಂಗಳೂರಿಗೆ ನಮ್ಮ ಹೋರಾಟ ಮುಂದುವರಿಯುತ್ತದೆ. 107 ಅಲ್ಲ, 307 ಹಾಕಿದ್ರೂ ನಮ್ಮ ಹೋರಾಟ ನಿಲ್ಲಲ್ಲ. ನಮ್ಮ ಕಾರ್ಯಕರ್ತರು ಲವ್ ಜಿಹಾದ್ ವಿರುದ್ಧ ಯಾವುದೇ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಇನ್ನು ನ್ಯೂ ಇಯರ್ ಪಾರ್ಟಿ ವಿರುದ್ಧ ಬಜರಂಗದಳ ಕಿಡಿ ವಿಚಾರಕ್ಕೆ ಸಂಬಂಧಿಸಿ ಬಜರಂಗದಳದವರ ಬಂಧನಕ್ಕೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ. ಪಾರ್ಟಿಗಳಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂದು ಹೇಳಲಿಕ್ಕೆ ಇವರ್ಯಾರು? ಬಜರಂಗದಳದ ನೈತಿಕ ಪೊಲೀಸ್‌ಗಿರಿ ನೋಡಿದರೆ ದ.ಕ ಜಿಲ್ಲೆಯಲ್ಲಿ ಸರ್ಕಾರ ಇಲ್ಲ, ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಜಿಲ್ಲೆಯಲ್ಲಿ ಪೊಲೀಸ್ ಇಲ್ಲ, ಬಹಿರಂಗವಾಗಿ ಇಲಾಖೆಯ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗುತ್ತಿದೆ. ಸರ್ಕಾರದ ಅಸ್ತಿತ್ವ ಪ್ರಶ್ನೆ ಮಾಡುವುದು ಏನನ್ನ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.