ಮಂಗಳೂರು: ಹಿಜಾಬ್ ಪರ ಮಾತನಾಡದ ಮುಸ್ಲಿಂ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿ; ಹಿಜಾಬ್ ಪರ ಅರ್ಜಿದಾರ ಆಲಂ ಪಾಷಾ ಒತ್ತಾಯ

Prasthutha|

ಮಂಗಳೂರು: ಶಾಲಾ ಕಾಲೇಜುಗಳಲ್ಲಿ ತಲೆದೋರಿದ್ದ ಹಿಜಾಬ್ ಸಮಸ್ಯೆಯಯನ್ನು ಮುಸ್ಲಿಂ ಜನಪ್ರತಿನಿಧಿಗಳು ಮನಸ್ಸು ಮಾಡಿದ್ದರೆ ಸೌಹಾರ್ದಯುತವಾಗಿ ಪರಿಹರಿಸಬಹುದಿತ್ತು ಎಂದು ಹಿಜಾಬ್ ಪರ ಸುಪ್ರೀಂ ಕೋರ್ಟ್ ಮೇಲ್ಮನವಿದಾರ, ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ತಿಳಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ಕೇವಲ ಕಾಲೇಜುಗಳಿಗಷ್ಟೇ ಸೀಮಿತವಾಗಿಲ್ಲ. ನಮ್ಮ ತಾಯಿ, ತಂಗಿಯಂದಿರು ಹಿಂದಿನಿಂದಲೂ ಧರಿಸಿಕೊಂಡು ಬಂದಿದ್ದಾರೆ. ಪ್ರವಾದಿವರ್ಯರ ಕಾಲದಿಂದಲೂ ಶಿರವಸ್ತ್ರಕ್ಕೆ ಗೌರವ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಅನಗತ್ಯ ಹಿಜಾಬ್ ವಿವಾದವನ್ನು ಸೃಷ್ಟಿಸಲಾಯಿತು. ಹೈಕೋರ್ಟ್ ಗೆ ಹಿಜಾಬ್ ವಿಚಾರವನ್ನ ಕೊಂಡೊಯ್ಯುವುದರ ಹಿಂದೆಯೂ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹಿಜಾಬ್ ಮುಸ್ಲಿಮರ ಧಾರ್ಮಿಕ ಮೂಲಭೂತ ಹಕ್ಕು ಅಲ್ಲ ಎಂಬ ಹೈಕೋರ್ಟ್ ತೀರ್ಪಿನ ಬಗ್ಗೆ ಹದೀಸ್, ಕುರ್ ಆನ್ ಸೂಕ್ತಗಳ ವಚನದೊಂದಿಗೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮುಸ್ಲಿಂ ಶಾಸಕ, ಸಂಸದರು ಎಲ್ಲಿ ಮಾತಾಡಬೇಕಿತ್ತೋ ಅಲ್ಲಿ ಮಾತಾಡಿಲ್ಲ. ಸಂಸತ್, ವಿಧಾನಸಭೆಯಲ್ಲಿ ಚರ್ಚಿಸಿಲ್ಲ. ಶಿಕ್ಷಣ ಸಚಿವರ ಬಳಿಗೆ ತೆರಳಿ ಹಿಜಾಬ್ ವಿಚಾರವಾಗಿ ಒತ್ತಡ ಹೇರಿಲ್ಲ. ಇಂತಹ ಜನಪ್ರತಿನಿಧಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಲೇಸು ಎಂದರು.

- Advertisement -

ಐಎಂಎ ಬಹುಕೋಟಿ ಹಗರಣದಲ್ಲಿ ಅರೆಸ್ಟ್ ಆಗಿದ್ದ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಯಾವೊಂದು ಷರತ್ತುಗಳಿಗೂ ಒಳಪಡದೇ ಕೆಲವೇ ದಿನಗಳಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿರುವುದು ಆತಂಕಕಾರಿ. ಹೀಗೆ ಆದರೆ ನಾಳೆ ವಿಜಯ್ ಮಲ್ಯ, ನೀರವ್ ಮೋದಿ, ರಾಣಾ ಕಪೂರ್ ನಂತವರೂ ಬೇಗನೇ ಜೈಲಿಗೆ ಹೋಗಿ ಬಿಡುಗಡೆಗೊಳ್ಳಬಹುದು. ಮನ್ಸೂರ್ ಖಾನ್ ಬಿಡುಗಡೆ ಹಿಂದೆ ಸಿಎಂ, ಸಚಿವರು ಸೇರಿದಂತೆ ಎಲ್ಲರ ಕೈವಾಡವೂ ಇದೆ. ಹೈಕೋರ್ಟ್ ಯಾವ ಆಧಾರದಲ್ಲಿ ಬೇಲ್ ನೀಡಿದೆ ಎಂಬುವುದು ಪ್ರಶ್ನಾರ್ಹ. ಕನಿಷ್ಟ ಭದ್ರತೆಯನ್ನೂ ಒದಗಿಸದೇ ವೈದ್ಯಕೀಯ ವರದಿ ಆಧರಿಸಿ ಜಾಮೀನು ನೀಡಿದ್ದಾಗಿ ತಿಳಿಸಿದೆ. ಆದರೆ ಜಾಮೀನಿಗೆ ಸಂಬಂಧಿಸಿ ಯಾವೊಂದು ಮೆಡಿಕಲ್ ಬೋರ್ಡ್ ಕೂಡಾ ಅನಾರೋಗ್ಯದ ಬಗ್ಗೆ ತಿಳಿಸಿಲ್ಲ. ಕನಿಷ್ಟ ಶೇಕಡಾ 50ರಷ್ಟರ ಬಾಂಡ್ ಅನ್ನೂ ನೀಡಿಲ್ಲ. ತನಿಖಾ ಸಂಸ್ಥೆಗಳು ಕೂಡಾ ಜಾಮೀನಿಗೆ ಎನ್ಓಸಿ ನೀಡಿಲ್ಲ ಎಂದು ಹೇಳಿದರು.

ಯಾವೊಂದು ವಿಚಾರಣೆಗೂ ಸಿಗದೇ ಮನ್ಸೂರ್ ಖಾನ್ ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದರು. ಹಾಗಾಗಿ ಆರೋಪಿಯನ್ನು ಸೂಕ್ತ ರೀತಿಯ ತನಿಖೆಗೆ ಒಳಪಡಿಸುವಂತೆ ಮತ್ತು ಮರು ಬಂಧನ ಮಾಡುವಂತೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ಶೀಘ್ರವೇ ವಿಚಾರಣೆಗೆ ದಿನಾಂಕವೂ ನಿಗದಿಯಾಗಲಿದ್ದು, ಬಡ ಜನರಿಗೆ ಸುಪ್ರೀಂ ಕೋರ್ಟ್ ನಿಂದಾದರೂ ನ್ಯಾಯ ಸಿಕ್ಕೀತು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.



Join Whatsapp