ಮಂಗಳೂರು: ಮತದಾನದ ಜಾಗೃತಿಗೆ ಮಾನವ ಸರಪಳಿ

Prasthutha|

ಮಂಗಳೂರು: ಯುವ ಜನರೇ ಈ ದೇಶದ ಸಂಪತ್ತು. ಅವರು ಮೇ.10ರಂದು ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪ್ರಜ್ಞಾವಂತಿಕೆ, ಬುದ್ಧಿವಂತಿಕೆ ಹಾಗೂ ವಿಶ್ಲೇಷಣಾತ್ಮಕತೆಯಿಂದ ತಮ್ಮ ಹಕ್ಕು ಚಲಾಯಿಸಿ ಸಮರ್ಥ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು

- Advertisement -

ಅವರು ಮೇ.7ರ ಭಾನುವಾರ ಮಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆಗೆ – ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

95 ವರ್ಷದ ಹಿರಿಯ ನಾಗರಿಕ ರಾಮಯ್ಯ ನಮ್ಮೊಂದಿಗಿದ್ದಾರೆ, ಮತದಾನದ ಮಹತ್ವವನ್ನು ತಿಳಿಸಿಕೊಡಲು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದ ಕಾರಣ ಯುವಜನತೆ ಅವರಿಂದ ಸ್ಪೂರ್ತಿ ಪಡೆಯಬೇಕು ಹಾಗೂ ಮೇ.10ರಂದು ನಡೆಯುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಡಗರ ಹಾಗೂ ಸಂಭ್ರಮದಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.

- Advertisement -

ನನ್ನ ಒಂದು ಮತದಾನದಿಂದ ಏನು ಆಗುವುದಿಲ್ಲ ಎಂಬ ನಕಾರಾತ್ಮಕ ಮನೋಭಾವದಿಂದ ಯುವಜನತೆ ಹೊರಬರಬೇಕು, ದೇಶದ ಅಭಿವೃದ್ಧಿಗೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಕಾಣಿಕೆ ನೀಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚೆನ್ನಬಸಪ್ಪ, ಮೂಡಾ ಆಯುಕ್ತ ಡಾ. ಭಾಸ್ಕರ್ ಸೇರಿದಂತೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ನ್ಯಾಷನಲ್ ಬಾಡಿಯ ಜನರಲ್ ಸೆಕ್ರೆಟರಿ ವಿಜಯವಿಷ್ಣು ಮಯ್ಯ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ನ ಮಂಗಳೂರು ವಿಭಾಗದ ಅಧ್ಯಕ್ಷ ಸತ್ಯ ರಂಜನ್ ರಾವ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವೃತ್ತದಲ್ಲಿ ಬೃಹತ್ ಮಾನವ ಸರಪಳಿಯನ್ನು ರಚಿಸಿ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು.

ನಂತರ ಜಾಥಾವು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.