ಮಂಗಳೂರು: ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ದೋಣಿ ಮುಗುಚಿ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಕಟ್ಟೆ ಭಾಗದಲ್ಲಿನ ನೇತ್ರಾವತಿ ನದಿಯಲ್ಲಿ ನಡೆದಿದೆ.
ಅಡ್ಯಾರ್ ನಿವಾಸಿ ರಾಬರ್ಟ್ ಫೆರಾವೊ ( 77 ) ಮೃತಪಟ್ಟ ದುರ್ದೈವಿ.
ರವಿವಾರ ಸಂಜೆ ಅಡ್ಯಾರ್ ಭಾಗದ ನೇತ್ರಾವತಿ ನದಿಯಲ್ಲಿ ರಾಬರ್ಟ್ ತನ್ನ ಸ್ವಂತ ದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ದೋಣಿ ಮಗುಚಿ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳೀಯರು ಶವವನ್ನು ವೆನ್ಲಾಕ್ ಆಸ್ಪತ್ರೆ ಸಾಗಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.