ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ನಗರದ ಪುರಭವನದ ಮರ್ಹೂಂ ಎಂ.ಜಿ.ರಹೀಂ ವೇದಿಕೆಯಲ್ಲಿ ಶುಕ್ರವಾರ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಗೌರವ ಪ್ರಶಸ್ತಿಯನ್ನು ಹಂಝತುಲ್ಲಾ ವೈ. ಕುವೇಂಡ ಬೆಂಗಳೂರು, ಮರಿಯಮ್ ಇಸ್ಮಾಈಲ್ ಉಳ್ಳಾಲ, ಎಂ.ಜಿ. ಶಾಹುಲ್ ಹಮೀದ್ ಗುರುಪುರ ಹಾಗೂ 2023ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೋಲೊ ಕಲ್ಲಡ್ಕ ಅವರಿಗೆ ಪದ್ಮಶ್ರೀ ಹರೇಕಳ ಹಾಜಬ್ಬ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾರಿ ಭವನ ನಿರ್ಮಿಸಬೇಕು ಎಂಬ ಬೇಡಿಕೆಯು ಬ್ಯಾರಿ ಸಾಹಿತ್ಯ ಅಕಾಡಮಿಯು ಸ್ಥಾಪನೆಗೊಂಡಾಗಲೇ ಇತ್ತು. ಅದಕ್ಕಾಗಿ ಈ ಹಿಂದೆ ಒಂದೆರೆಡು ಸ್ಥಳಗಳನ್ನೂ ಗುರುತಿಸಲಾಗಿತ್ತು. ಕಾರಣಾಂತರದಿಂದ ಅದನ್ನು ಕೈ ಬಿಡಲಾಗಿದೆ. ಇದೀಗ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಟೆಕಲ್-ಅಸೈಗೋಳಿ ಮಧ್ಯದ ಪ್ರಮುಖ ರಸ್ತೆಯ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿದ್ದು, 6 ಕೋ.ರೂ. ಅನುದಾನವೂ ಬಿಡುಗಡೆಗೊಂಡಿದೆ. ಹಾಗಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.