ಮಂಗಳೂರು: ಸಂಪೂರ್ಣವಾಗಿ ಆಧಾರ್ ಸೇವೆಗಳಿಗೆ ಸಂಬಂಧಿಸಿದ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಎಲ್ಲಾ ರೀತಿಯ ಸೇವೆಗಳು ಲಭ್ಯವಾಗಲಿದೆ ಅದರ ಸದುಪಯೋಗ ಪಡೆದುಕೊಳ್ಳುವಂತೆ ನಗರದ ಬಲ್ಮಠ ರಸ್ತೆಯ ಕ್ರಿಸ್ಟಲ್ ಆರ್ಕೇಡ್ನಲ್ಲಿ ಯು.ಐ.ಡಿ.ಎ.ಐ ವತಿಯಿಂದ ನೂತನವಾಗಿ ಆರಂಭಗೊಂಡ ಆಧಾರ್ ಸೇವಾ ಕೇಂದವನ್ನು ಮೇ.10ರ ಮಂಗಳವಾರ ಲೋಕಾರ್ಪಣೆ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕರೆ ನೀಡಿದರು.
ಸೇವಾ ಕೇಂದ್ರದಲ್ಲಿ ದೊರಕುವ ಸೌಲಭ್ಯಗಳಾದ ಸಾಮಾನ್ಯ ಆಧಾರ್ ಪ್ರತಿ, ಸರಿಯಾದ ಕ್ಯೂ.ಆರ್ ಕೋಡ್, ವಿಕಲಚೇತರಿಗೆ ವೀಲ್ಚೇರ್ ಸೌಲಭ್ಯ, ಹೊಸ ಆಧಾರ್ ನೊಂದಣಿ, 5 ರಿಂದ 15 ವರ್ಷದ ಮಕ್ಕಳ ಬಯೋಮೆಟ್ರಿಕ್ ಉಚಿತವಾಗಿ ಬದಲಾವಣೆ, ಪೋಟೋ, ದೂರವಾಣಿ ಸಂಖ್ಯೆ, ಹೆಸರು, ಇ-ಮೇಲ್, ಹುಟ್ಟಿದ ದಿನಾಂಕ, ವಿಳಾಸ, ಹಾಗೂ ಕಳೆದು ಹೋದ ಆಧಾರ್ ಕಾರ್ಡ್ ಸುಲಭವಾಗಿ ಹೆಸರು ಮತ್ತು ಬಯೋಮೇಟ್ರಿಕ್ ಸಹಾಯದಿಂದ ಪಡೆಯುವ ಸೌಲಭ್ಯಗಳನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಉನ್ನತ ಮಟ್ಟದ ಪ್ರಯೋಜನವನ್ನು ತಲುಪಿಸಲು ಇದು ಒಳ್ಳೆಯ ಕೇಂದ್ರ ಎಂದವರು ಹೇಳಿದರು.
ಶಾಸಕರಾದ ವೇದವ್ಯಾಸ್ ಕಾಮತ್ ಅವರು ಆಧಾರ್ ಕೇಂದ್ರವನ್ನು ವೀಕ್ಷಿಸಿ ತಮ್ಮ ಹೆಸರು ಹಾಗೂ ಬಯೋಮೇಟ್ರಿಕ್ ನೀಡಿ ಆಧಾರ್ ಪ್ರತಿಯನ್ನು ಪಡೆದುಕೊಂಡು ಪರಿಶೀಲಿಸಿದರು. ಆಧಾರ್ ಕಾರ್ಡ್ ಹಾಗೂ ಎಲ್ಲ ತಿದ್ದುಪಡಿ ಮತ್ತು ಇನ್ನಿತರ ಎಲ್ಲ ವ್ಯವಸ್ಥೆಗಳನ್ನು ಮಾಡಿಸುವ ದೃಷ್ಟಿಯಲ್ಲಿ ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಮತ್ತು ಎಲ್ಲಾ ವಿದ್ಯಾಸಂಸ್ಥೆಗಳಿಗೆ ಇದರ ಮಾಹಿತಿಯನ್ನು ತಲುಪಿಸಿ ಬ್ಯಾಂಕಿಂಗ್ ಮತ್ತು ಆರೋಗ್ಯದ ಸವಲತ್ತು ಪಡೆದುಕೊಳ್ಳಲು ಸಹಕಾರಿಯಾಗುವಂತೆ ಅವರು ಸೂಚಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ವಿಶಾಲ ಸ್ಥಳಾವಕಾಶದೊಂದಿಗೆ ಸುಸಜ್ಜಿತವಾಗಿ ಸೇವಾಕೇಂದ್ರ ಉದ್ಘಾಟನೆಗೊಂಡಿದ್ದು ಜನತೆಗೆ ಉತ್ತಮ ಸೇವೆ ಲಭಿಸುವಂತಾಗಲಿ ಎಂದು ಶುಭ ಹಾರೈಸಿದರು. ಸೆಂಟರ್ ಮ್ಯಾನೇಜರ್ ಬಾಲಕೃಷ್ಣ ಅವರು ಸೇವಾಕೇಂದ್ರದ ಬಗ್ಗೆ ವಿವರಿಸಿ, ಸೇವಾ ಕೇಂದ್ರವು ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸಲಿದ್ದು, ದಿನಕ್ಕೆ 500 ಜನರ ನೊಂದಣಿ ಹಾಗೂ ತಿದ್ದುಪಡಿ ಸಾಮಥ್ರ್ಯ ಹೊಂದಿದೆ, ಯು.ಐ.ಡಿ.ಎ.ಐ ಈಗಾಗಲೇ ಮೈಸೂರು, ಧಾರವಾಡ, ಬೆಂಗಳೂರು, ದಾವಣಗೆರೆಯಲ್ಲಿ ಪ್ರಾದೇಶಿಕವಾಗಿ ಸೇವಾಕೇಂದ್ರಗಳನ್ನು ಆರಂಭಿಸಿದ್ದು ಮಂಗಳೂರಿನ ಸೇವಾ ಕೇಂದ್ರ ರಾಜ್ಯದ 5ನೇ ಹಾಗೂ ದೇಶದ 73ನೇ ಕೇಂದ್ರವಾಗಿದೆ. ಮಂಗಳೂರು ಸೇವಾ ಕೇಂದ್ರದಲ್ಲಿ 20 ಮಂದಿ ಸಿಬ್ಬಂದಿ ಇದ್ದು ಆಧಾರ್ಗೆ ಸಂಬಂಧಿಸಿ ಜನತೆಗೆ ತ್ವರಿತ ಸೇವೆ ದೊರೆಯಲಿದೆ.ವಾರದ ಏಳು ದಿನಗಳ ಕಾಲವೂ ಕಾರ್ಯಾಚರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮ್ಯಾನೇಜರ್ ಗಜೇಂದ್ರ, ದಾವಣಗೆರೆ ಕೇಂದ್ರದ ಮ್ಯಾನೇಜರ್ ಪ್ರಜ್ವಲ್ ಹಾಗೂ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.