ಮಂಗಳೂರು: ರಸ್ತೆ ದಾಟುವ ವೇಳೆ ಅಪಘಾತದಿಂದ ಪಾರಾಗಿದ್ದ ಮಹಿಳೆಯ ವಿರುದ್ಧವೂ ಕೇಸು ದಾಖಲು

Prasthutha|

ಮಂಗಳೂರು: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ಬಳಿ ಮಂಗಳವಾರ ರಸ್ತೆ ದಾಟುತ್ತಿದ್ದ ವೇಳೆ ಅಪಘಾತದಿಂದ ಗ್ರೇಟ್ ಎಸ್ಕೇಪ್ ಆಗಿದ್ದ ಮಹಿಳೆಯ ವಿರುದ್ಧವೂ ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯು ನ್ಯಾಯಾಲಯದ ಮೂಲಕ ದಂಡ ಪಾವತಿಸಬೇಕಾಗಿದೆ.

- Advertisement -

ಕಾಸರಗೋಡು ಜಿಲ್ಲೆಯ ವರ್ಕಾಡಿಯ ಐಸಮ್ಮ(63) ಎಂಬವರು ರಸ್ತೆ ದಾಟುವಾಗ ಅಪಘಾತದಿಂದ ಪಾರಾಗಿದ್ದ ಮಹಿಳೆ. ರಸ್ತೆ ದಾಟುವಾಗ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಸಂಚಾರ ನಿಯಂತ್ರಣ ನಿಯಮ ಸೆ.13 ಮತ್ತು ಸೆ.92ಜಿ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ದಕ್ಷಿಣ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

ಮಂಗಳೂರಿನಿಂದ ಮುಡಿಪುಗೆ ತೆರಳುತ್ತಿದ್ದ ಗೋಪಾಲಕೃಷ್ಣ ಎಂಬ ಹೆಸರಿನ ಖಾಸಗಿ ಬಸ್ ತೌಡುಗೋಳಿ ಕ್ರಾಸ್ ಬಳಿ ಸಂಚರಿಸುತ್ತಿದ್ದಾಗ ಮಹಿಳೆ ರಸ್ತೆ ದಾಟುವಾಗ ನಿರ್ಲಕ್ಷ್ಯ ವಹಿಸಿದ್ದು, ಸಂಚಾರ ನಿಯಮವನ್ನು ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು ಘಟನೆ ನಡೆದ ಎರಡು ದಿನದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ಮಹಿಳೆಯು ಬಸ್ಸನ್ನು ಗಮನಿಸದೆ ರಸ್ತೆ ದಾಟಿದ್ದು, ತಕ್ಷಣ ಬಸ್ ಚಾಲಕ ಬಸ್ಸನ್ನು ಎಡಕ್ಕೆ ಸರಿಸಿದ್ದಾರೆ. ಇದರಿಂದ ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದರು. ಸಿಸಿಟಿವಿಯಲ್ಲಿ ದಾಖಲಾದ ಈ ಘಟನೆಯ ದೃಶ್ಯವು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಮಹಿಳೆಗೆ ಬಸ್ ಢಿಕ್ಕಿ ಹೊಡೆಯುವುದನ್ನು ಬಸ್ ಚಾಲಕ ತಪ್ಪಿಸಿದ್ದರೂ, ಕರ್ಕಶ ಶಬ್ಧಗಳೊಂದಿಗೆ ಕಿರಿದಾದ ರಸ್ತೆಯಲ್ಲಿ ಅತಿವೇಗ, ಅಜಾಗರೂಕತೆಯ ಬಸ್ ಚಾಲನೆಯ ಹಿನ್ನೆಲೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ದಂಡ ವಿಧಿಸಿದ್ದರು. ನಂತರ ಬಸ್ಸನ್ನು ವಶಕ್ಕೆ ಪಡೆದು ಕರ್ಕಶ ಹಾರ್ನ್ ಕಿತ್ತು ಹಾಕಿದ್ದರು.

Join Whatsapp