ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂದೂರ್ ವೆಲ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಐರಿನ್ ಡಿಸೋಜ (65) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಕಂಕನಾಡಿ ಕಡೆಗೆ ಚಲಿಸುತ್ತಿದ್ದ ಬಸ್ ಬೆಂದೂರ್ ವೆಲ್ ಎಂಬಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಅವರ ಮೇಲೆ ಬಸ್ ಹರಿದಿದೆ ಎಂದು ತಿಳಿದು ಬಂದಿದೆ. ಬಸ್ ಚಾಲಕನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಬೆಂದೂರುವೆಲ್ ಸರ್ಕಲ್ ನಲ್ಲಿ ಆ್ಯಸ್ಲೇನ್ ಟ್ರಾವೆಲ್ಸ್ ಬಸ್ KA-19-AA-2282 ಸರಿಪಾಳ್ಯ ದಿಂದ ಮಂಗಳೂರಿಗೆ ರೂಟ್ ನಂ 4B ರ ಚಾಲಕ ತನ್ನ ಬಸ್ ನ್ನು ಅಗ್ನೀಸ್ ಸರ್ಕಲ್ ಕಡೆಯಿಂದ ಚಲಾಯಿಸಿಕೊಂಡು ಬಂದು ಬೆಂದೂರುವೆಲ್ ಸರ್ಕಲ್ ನಲ್ಲಿ ಪ್ರಯಾಣಿಕರನ್ನು ಇಳಿಸಿದ್ದಾರೆ. ಅದೇ ಬಸ್ಸಿನಲ್ಲಿ ಪ್ರಯಾಣಿಸಿ ಬೆಂದೂರುವೆಲ್ ಸರ್ಕಲ್ ನಲ್ಲಿ ಇಳಿದು ಬಸ್ಸಿನ ಮುಂಭಾಗ ರಸ್ತೆಯನ್ನು ಐರಿನ್ ಅವರು ದಾಟುತ್ತಿದ್ದರು. ಆಗ ಬಸ್’ನ ಚಾಲಕ ಅಜಾಗರೂಕತೆಯಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಆಕೆ ಕೆಳಗೆಬಿದ್ದಾಗ ಆಕೆಯ ಮೇಲೆ ಬಸ್ಸಿನ ಮುಂಭಾಗದ ಬಲ ಚಕ್ರ ಹರಿದು ಹೋಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.
ಬೆಂದೂರುವೆಲ್ ಜಂಕ್ಷನ್ ನಲ್ಲಿ ಒಂದು ವಾರದೊಳಗೆ ಇದು ಎರಡನೇ ಸಾವಾಗಿದೆ. ಮಾರ್ಚ್ 24 ರಂದು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ನಂತರ 11 ವರ್ಷದ ಬಾಲಕನ ಮೇಲೆ ಬಸ್ಸು ಹರಿದಿತ್ತು