ಮಂಗಳೂರು: ಯುದ್ಧ ಪೀಡಿತ ಉಕ್ರೇನ್’ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಮಂಗಳೂರಿನ ಪಡೀಲ್’ನ ಕ್ಲೇಟನ್ ಡಿಸೋಜ ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಮೊದಲನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ.
ದೇರಬೈಲ್’ನ ಅನೈನ ಅನ್ನ, ಕಾರ್‍ಕೀವ್ ನಗರದಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರು ವಿದ್ಯಾರ್ಥಿಗಳು 26ನೇ ತಾರೀಕಿನಂದು ಉಕ್ರೇನ್’ನಿಂದ ಭಾರತಕ್ಕೆ ಹಿಂತಿರುಗಬೇಕಿತ್ತು. ಆದರೆ ದಾಖಲೆ ಪತ್ರದ ಸಮಸ್ಯೆಯಿಂದಾಗಿ ವಿಮಾನದ ಟಿಕೆಟ್ ಕಾಯ್ದಿರಿಸುಲ್ಲಿ ವಿಳಂಬವಾಗಿದ್ದು, ಸದ್ಯಕ್ಕೆ ಇಬ್ಬರೂ ವಿದ್ಯಾರ್ಥಿಗಳು ಹಾಸ್ಟೆಲುಗಳಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಉಕ್ರೇನ್ ಸರ್ಕಾರವು ತನ್ನ ವಾಯುಯಾನ ಮಾರ್ಗವನ್ನು ಮುಚ್ವಿದೆ. ಇದರಿಂದಾಗಿ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಕರೆತರಲು ಹೋಗಿದ್ದ ಏರ್ ಇಂಡಿಯಾ ವಿಮಾನವು ಪುನಃ ಭಾರತಕ್ಕೆ ಮರಳಿದೆ.
ಜಿಲ್ಲಾಡಳಿತವು ರಾಜ್ಯ ಸರಕಾರ ಮತ್ತು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಸದ್ಯ ಜಿಲ್ಲಾಡಳಿತವು ವಿದ್ಯಾರ್ಥಿಗಳ ಪೋಷಕರ ಸಂಪರ್ಕದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.