ಮಂಗಳೂರು: ನಾಪತ್ತೆಯಾಗಿದ್ದ 13 ವರ್ಷದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ

Prasthutha|

ಮಂಗಳೂರು: ನಾಪತ್ತೆಯಾಗಿದ್ದ 13 ವರ್ಷದ ಬಾಲಕನ ಮೃತದೇಹ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದೆ.

- Advertisement -

ಮೃತ ಬಾಲಕನನ್ನು ಬಿ.ಸಿ.ರೋಡು ಸಮೀಪದ ಮಿತ್ತಬೈಲು ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಝೀಂ ಎಂದು ಗುರುತಿಸಲಾಗಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಅಝೀಂ ನಾಪತ್ತೆಯಾಗಿದ್ದ.

- Advertisement -

ಬಾಲಕ ಕಾಣೆಯಾದಾಗ ಗಾಬರಿಗೊಂಡ ಮನೆಮಂದಿ ಬಾಲಕನ ಕೈಯಲ್ಲಿದ್ದ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ರಿಂಗಣಿಸುತ್ತಿತ್ತು. ಆದರೆ ಬಾಲಕ ಅಝೀಂ ಕರೆ ಸ್ವೀಕಾರ ಮಾಡುತ್ತಿರಲಿಲ್ಲ. ನಂತರ ಕುಟುಂಬಸ್ಥರು ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.

ನಂತರ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಬಾಲಕನ ಉಡುಪು, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ತಡರಾತ್ರಿ ವೇಳೆ ಪತ್ತೆಯಾಗಿದೆ.

ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಅಝೀಂನೊಂದಿಗೆ ಇತರ ಸ್ನೇಹಿತರು ಕೆರೆಯ ಬಳಿ ಹೋಗಿದ್ದರಾ? ಅಥವಾ ಅಝೀಂ ಒಬ್ಬನೇ ಹೋಗಿದ್ದನಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Join Whatsapp