►ಸಂಸದರ ಅಮಾನತು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
ಮಂಗಳೂರು: 146 ವಿರೋಧ ಪಕ್ಷಗಳ ಸಂಸದರ ಅಮಾನತು ಖಂಡನೀಯ ಹಾಗೂ ಸರ್ವಾಧಿಕಾರಿ ಧೋರಣೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಮಂಗಳೂರಿನ ಮಿನಿವಿಧಾನ ಸೌಧದ ಬಳಿ ಸಂಸದರ ಅಮಾನತು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆ ನಮ್ಮ ಬೇಡಿಕೆಯಾಗಿತ್ತು. ಆದರೆ ಕೇಂದ್ರ ಸರಕಾರ ಹಠಮಾರಿ ಧೋರಣೆಯಿಂದ ಅಹಂಕಾರದಿಂದ ಉತ್ತರ ಕೊಡಲಿಲ್ಲ. ಭದ್ರತಾ ಲೋಪದ ಬಗ್ಗೆ ಮಾತಾಡಿಲ್ಲ ಬೇಡಿಕೆ ಇಟ್ಟವರನ್ನು ಅಮಾನತು ಮಾಡಿದ್ದಾರೆ. ಯಾರೂ ಪ್ರಶ್ನೆ ಮಾಡಬಾರದು ಎಂಬ ಧೊರಣೆ ಮೋದಿ ಸರ್ಕಾರದ್ದು, ಇದು ಅಘೋಷಿತ ತುರ್ತು ಪರಿಸ್ಥಿತಿ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳ ಸರ್ಕಾರ ಇರುವಲ್ಲಿ ರಾಜ್ಯಪಾಲರ ಮೂಲಕ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ಐಟಿ, ಇಡಿ ಬಿಜೆಪಿ ಪಕ್ಷದವರ ಮೇಲೆ ರೇಡ್ ಮಾಡಲ್ಲ. ಕೇವಲ ವಿರೋಧ ಪಕ್ಷಗಳ ಮೇಲೆ ಐಡಿ ಇಡಿಯನ್ನು ಬಳಸಲಾಗುತ್ತಿದೆ. ಚುನಾವಣಾ ಆಯೋಗವನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದೇಶದ ಎಲ್ಲಾ ಸಂಸ್ಥೆಗಳನ್ನು ಹತೋಟಿಗೆ ತೆಗೆದುಕೊಂಡು ತಮ್ಮ ಸ್ವಾರ್ಥಕ್ಕೆ ಬಳಸುತ್ತಿದ್ದಾರೆ. ಇದರಿಂದ ದೇಶ ದುರ್ಬಲ ಆಗುತ್ತಿದೆ. ದೇಶದ ಜಾತ್ಯಾತೀತ ಸಮಾಜವಾದ ಸಿದ್ಧಾಂತವನ್ನು ಮೋದಿ ಸರ್ಕಾರ ತೆಗೆದು ಹಾಕುತ್ತಿದೆ. ಮೋದಿ ಸರ್ಕಾರ ಕೇವಲ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ಮಾಧ್ಯಮಗಳನ್ನೂ ಹತೋಟಿಗೆ ತೆಗೆದುಕೊಂಡಿದ್ದಾರೆ. ಮೋದಿ ಅಮಿತ್ ಶಾ ಅವರನ್ನು ಯಾವ ಮಾಧ್ಯಮವೂ ಪ್ರಶ್ನೆ ಮಾಡಲ್ಲ, ಪ್ರಶ್ನಿಸಿದರೆ ಅವರ ಮೇಲೆ ದಾಳಿ ಆಗುತ್ತೆ, ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಮೋದಿ ಮೂರನೇ ಸಲ ಪ್ರಧಾನಿಯಾದರೆ ಸಂವಿಧಾನ ಉಳಿಯಲ್ಲ, ಕೇವಲ ಮೋದಿಯವರ ಪೂಜೆ ಮಾಡುತ್ತಾ ಕೂರಬೇಕು. ದೇಶದಲ್ಲಿ ಮೂಲಭೂತ ಹಕ್ಕುಗಳು ಕ್ಷೀಣಿಸುತ್ತಿದೆ. ಇದರಿಂದ ಎಲ್ಲರೂ ಒಟ್ಟಾಗಿ ಹೋರಾಡಬೇಕು. ದೇಶವನ್ನು ಉಳಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಚಿವ ರಮನಾಥ ರೈ ಮಾತನಾಡಿ, ಸಂಸತ್ ಭವನಕ್ಕೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದ್ದು ಗಂಭೀರ ವಿಷಯವಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಮಾಡಲು ಇಂಡಿಯಾ ಒಕ್ಕೂಟ ಒತ್ತಾಯ ಮಾಡಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಸಂಸದರ ಅಮಾನತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನ ಎಂದು ಹೇಳಿದ್ದಾರೆ.
ಸದನದಲ್ಲಿ ಮಾತಾಡುವ ಬದಲು ಹೊರಗೆ ಮಾತಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ, ಗೌರವ ಕೊಡಲ್ಲ. ತಮ್ಮ ವಿರೋಧಿಗಳನ್ನು ಸಂಘಟನೆಗಳನ್ನು ಜನರನ್ನು ದೇಶದ್ರೋಹಿಗಳು ಎಂಬಂತೆ ಚಿತ್ರಿಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದಾರೆ. ಚುನಾವಣೆ ಗೆಲ್ಲಲು ತಂತ್ರಗಾರಿಕೆ ಮಾಡೋದನ್ನು ಬಿಟ್ಟು ಅವರು ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದರು.