ಮಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ವಕೀಲ ರಾಜೇಶ್ ಪತ್ತೆಗೆ ಲುಕ್ ಔಟ್ ನೋಟೀಸ್

Prasthutha|

ಮಂಗಳೂರು : ಉತ್ತರ ಭಾರತ ಮೂಲದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕ್ ಔಟ್ ನೋಟೀಸು ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.

- Advertisement -


ಈ ಸಂಬಂಧ ದೇಶದ ಎಲ್ಲ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಲುಕ್ ಔಟ್ ನೋಟೀಸು ನೀಡಲಾಗುವುದು. ಅಲ್ಲದೆ ಈತ ಕಂಡುಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತಿಳಿಸುಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೊಟೇಲ್, ಪೊಲೀಸ್ ಠಾಣೆ ಆಸುಪಾಸಿನಲ್ಲಿ ಅಂಟಿಸುವ ಪ್ರಕ್ರಿಯೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನಿರ್ದೇಶನ ನೀಡಲು ಮುಂದಾಗಿದ್ದಾರೆ. ಇದಲ್ಲದೆ ವಕೀಲ ರಾಜೇಶ್ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಕೂಡಾ ಸೀಝ್ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.


ಆರೋಪಿ ತನ್ನ ಪ್ರಭಾವವನ್ನು ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಲುಕ್ಔಟ್ ನೋಟೀಸು ಜಾರಿ ಮಾಡಲಾಗುತ್ತದೆ. ಆರೋಪಿ ವಕೀಲ ರಾಜೇಶ್ ಯಾವುದೇ ಒಂದು ಜಾಗದಲ್ಲಿರದೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿರುವುದು ಮಾತ್ರವಲ್ಲದೆ, ತನ್ನ ಮೊಬೈಲ್ ಸಿಮ್ ಕೂಡಾ ಆಗಾಗ್ಗೆ ಬದಲಾಯಿಸುತ್ತಿರುವ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದು, ಇದು ಆರೋಪಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಕಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಲುಕ್ ಔಟ್ ನೋಟೀಸ್ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Join Whatsapp