ವಿಧಾನಸಭೆ ಲೋಕಸಭೆ ಚುನಾವಣೆಯಲ್ಲೂ ಮಹಿಳಾ ಮೀಸಲಾತಿ ಬರಬೇಕು: ದಿನೇಶ್ ಗುಂಡೂರಾವ್ ಆಗ್ರಹ
ಮಂಗಳೂರು: ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ವಿಧಾನಸಭೆ ಲೋಕಸಭೆ ಚುನಾವಣೆಯಲ್ಲೂ ಮಹಿಳಾ ಮೀಸಲಾತಿ ಬರಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ
ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಮಂಗಳೂರು ಬಿಜೈ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸರಕಾರದ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರಿಗೆ ಶಕ್ತಿ ಸಿಗುತ್ತೆ, ಹಣ ಉಳಿತಾಯ ಆಗುತ್ತೆ, ಹೊರಗೆ ಹೆಜ್ಜೆ ಇಡಲು ಅವಕಾಶ ಮಾಡಿಕೊಟ್ಟಿದೆ,
ದುಡಿಮೆಗೆ ಹೋಗಲು ಅನುಕೂಲ, ಉಳಿತಾಯ ಹಣದ ಪ್ರಯೋಜನ ಮನೆಗೆ ಕುಟುಂಬಕ್ಕೆ ಸಿಗುತ್ತೆ ಎಂದಿದ್ದಾರೆ.
ಇಂಥಾ ತೀರ್ಮಾನ ತೆಗೆದುಕೊಳ್ಳಲು ಬದ್ಧತೆ ಧೈರ್ಯ ಬೇಕು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನೈತಿಕತೆಯೂ ಬೇಕು. ಕಾಂಗ್ರೆಸ್ ಸರಕಾರಕ್ಕೆ ಆ ಬದ್ಧತೆ ಧೈರ್ಯ ನೈತಿಕತೆ ಇದೆ ಎಂದರು.
ಐದು ಗ್ಯಾರಂಟಿ ಯೋಜನೆಗಳ ವಿಶೇಷತೆ ಎಂದರೆ
ಜಾತಿ ಧರ್ಮ ಭಾಷೆಯ ತಾರತಮ್ಯ ಇಲ್ಲ, ನಾಡಿನ ಎಲ್ಲಾ ಜನರಿಗೂ ಯೋಜನೆ ಮಾಡಲಾಗಿದೆ. ಸಿದ್ದರಾಮಯ್ಯ ಸರಕಾರ ನಾಡಿನ ಎಲ್ಲಾ ಜನರ ಪರವಾಗಿ ಕೆಲಸ ಮಾಡಲಿದೆ ಎಂದರು.
ಕಾರ್ಯಕ್ರಮಕ್ಕೆ ಗೈರುಹಾಜರಾದ ಸ್ಥಳಿಯ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಗೆ ಟಾಂಗ್ ನೀಡಿದ ಸಚಿವರು, ಕಾರ್ಯಕ್ರಮಕ್ಕೆ ಬಂದರೆ ಕಾಂಗ್ರೆಸ್ ಸರಕಾರದ ಯೋಜನೆಯನ್ನು ಹೊಗಳಬೇಕಾಗುತ್ತದೆ ಎಂಬ ಕಾರಣಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.