ಮಂಗಳೂರು: ಸೆ. 26ರಂದು ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಟ್ರಸ್ಟ್ ವಾರ್ಷಿಕೋತ್ಸವ

Prasthutha|


ಮಂಗಳೂರು: ನಿರಂತರ ರಕ್ತದಾನ ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ದುಡಿಯುವ, ಅಂಗವೈಕಲ್ಯಕ್ಕೆ ಒಳಗಾದವರಿಗೆ ಕೃತಕ ಸಲಕರಣೆ ವಿತರಿಸುವ ಸಾಮಾಜಿಕ ಸೇವಾ ಸಂಸ್ಥೆ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 7ನೇ ಹಾಗೂ ವಾಯ್ಸ್ ಆಫ್ ಟ್ರಸ್ಟ್ ಇದರ ಪ್ರಥಮ ವಾರ್ಷಿಕೋತ್ಸವ ಸೆ. 26 ರಂದು ಬೆಳಗ್ಗೆ 10 ಗಂಟೆಗೆ ನಗರದ ರಾವ್ ಆ್ಯಂಡ್ ರಾವ್ ಬಳಿ ನಗರದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ, ಬಿತ್ತಿ ಪತ್ರ ಅನಾವರಣ ಸಂಸ್ಥೆಯ ಕಚೇರಿಯಲ್ಲಿ ಬುಧವಾರ ನಡೆಯಿತು.

- Advertisement -

ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ ನ ಅಧ್ಯಕ್ಷ ಡಾ| ಓಸ್ವಾಲ್ಡ್ ಪುರ್ಟಾಡೋ ಎಂಜೆಎಫ್ ಮಾತನಾಡಿ, ಸ್ಥಾಪಕಾಧ್ಯಕ್ಷ ರವೂಫ್ ಬಂದರ್ ಅವರ ಉದಾತ್ತ ಸಮಾಜ ಸೇವಾ ಚಿಂತನೆಯೊಂದಿಗೆ ದಿ ವಾಯ್ಸ್ ಬ್ಲಡ್ ಡೋನರ್ಸ್ ಮಂಗಳೂರು, ವಾಯ್ಸ್ ಆಫ್ ವುಮನ್ ವಿಂಗ್ಸ್ ಮಂಗಳೂರು ಮತ್ತು ವಾಯ್ಸ್ ಆಫ್ ಟ್ರಸ್ಟ್ ಮಂಗಳೂರು ಈ ಮೂರು ಸಮಾಜ ಸೇವಾ ಸಂಸ್ಥೆಯಿಂದ ಪ್ರೇರಣೆಗೊಂಡು ತಾಯಿಯ ಸ್ಮರಣಾರ್ಥ ತನ್ನ ಸ್ವಂತ ಖರ್ಚಿನಲ್ಲಿ ಸಮಾಜಕ್ಕೆ ಒಂದು ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಿದ್ದೇನೆ. 300 ನೇತ್ರದಾನಿಗಳಿಂದ ಕಣ್ಣುಗಳನ್ನು ಸಂಗ್ರಹಿಸಿ ಸುಮಾರು 600 ಜನರಿಗೆ ಕಣ್ಣು ದಾನ ಮಾಡುವ ಕೆಲಸವಾಗಿದೆ ಎಂದರು.

ವಾಯ್ಸ್ ಆಫ್ ಟ್ರಸ್ಟ್ ಅಧ್ಯಕ್ಷ ಝಾಹಿರ್ ಅಬ್ಬಾಸ್ ಮಾತನಾಡಿ, ಈ ಬಾರಿಯೂ ಸೇವಾ ಕಾರ್ಯ ಮುಂದುವರಿಯಲಿದೆ ಎಂದರು.

- Advertisement -

ದಿ ವಾಯ್ಸ್ ಬ್ಲಡ್ ಡೋನರ್ಸ್ ಬಗ್ಗೆ…

ದಿ ವಾಯ್ಸ್ ಬ್ಲಡ್ ಡೋನರ್ಸ್ ಮಂಗಳೂರು, ವಾಯ್ಸ್ ಆಫ್ ವುಮನ್ ವಿಂಗ್ಸ್ ಮಂಗಳೂರು ಮತ್ತು ವಾಯ್ಸ್ ಆಫ್ ಟ್ರಸ್ಟ್  ಮಂಗಳೂರು ಈ ಮೂರು ಸಮಾಜ ಸೇವಾ ಸಂಸ್ಥೆಗಳು ದ.ಕ.ಜಿಲ್ಲೆಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಳಾಗಿವೆ.

1995 ರಿಂದಲೇ ಮಂಗಳೂರು ಬಂದರ್ ಕಂದಕ್ ಪ್ರದೇಶದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ತನ್ನ ಕೈಯಿಂದ ಹಣ ಹಾಕಿ ಮತ್ತು ಸ್ನೇಹಿತರ, ಹಿತ್ತೈಷಿಗಳ ಸಹಾಯದಿಂದ ಬಡಜನರಿಗೆ ಆಹಾರ ಕಿಟ್ ವಿತರಣೆ, ರಮ್ಝಾನ್ ಕಿಟ್ ವಿತರಣೆ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡುತ್ತಾ ಬಡವರ ಬಂಧು ಎಂದು ಗುರುತಿಸಿಕೊಂಡು ಜನಾನುರಾಗಿ ಬೆಳೆದು ಬಂದ ಅಬ್ದುಲ್ ರವೂಫ್ ಬಂದರ್ ರವರು 2017 ರಲ್ಲಿ *ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್* ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಸ್ಥಾಪಕಾಧ್ಯಕ್ಷರಾಗಿ ಪ್ರತೀ ತಿಂಗಳು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಸಂಘಟಿಸಿ ರಕ್ತ ಸಂಗ್ರಹಿಸಿ ರಕ್ತದ ಅವಶ್ಯಕತೆಯಿರುವವರಿಗೆ ನೀಡಿ ಒಂದು ದಾಖಲೆಯನ್ನೇ ಮಾಡಿದರು. ಹಲವಾರು ವರ್ಷಗಳ ಕಾಲ ಇದರ ಅಧ್ಯಕ್ಷರಾಗಿದ್ದುಕೊಂಡು ಸಮರ್ಥವಾಗಿ ಮುನ್ನಡೆಸಿ ಈಗಲೂ ನಿರಂತರ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರತಿಯೊಂದು ಕಾರ್ಯಕ್ರಮಗಳ ನೇತೃತ್ವ ವಹಿಸಿ ಪ್ರಸ್ತುತ ಸಂಘಟನೆಗೆ ಕೀರ್ತಿಯನ್ನು ತಂದಿದ್ದಾರೆ.

ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಕಳೆದ 7  ವರ್ಷಗಳಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಅವಶ್ಯಕತೆಯಿಂದ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವವರಿಗೆ ರಕ್ತ ಒದಗಿಸಿ ಸಾವಿರಾರು ಮಂದಿಗೆ ಜೀವದಾನ ನೀಡಿ ಅನೇಕ ಕುಟುಂಬಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.

ಬರೇ ರಕ್ತದಾನ ಮಾತ್ರವಲ್ಲದೆ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಚಿಕಿತ್ಸೆಗೆ ಬೇಕಾಗುವ ಎಲ್ಲಾ ರೀತಿಯ ನೆರವನ್ನು ನೀಡುತ್ತಾ ಬಂದಿದೆ.

ವಿಕಲ ಚೇತನರಿಗೆ ಬೇಕಾಗುವ ವೀಲ್ ಚೆಯರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಮುಂತಾದ ಪರಿಕರಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ.

ಬಡ ಹೆಣ್ಣುಮಕ್ಕಳ ಮದುವೆಗೆ ಬೇಕಾಗುವ ಒಳ್ಳೆಯ ಗುಣಮಟ್ಟದ ಸೀರೆ, ಚೂಡಿದಾರ, ವಾಚು ಇತ್ಯಾದಿಗಳನ್ನು ನೀಡುತ್ತಾ ಬಡ ಹೆಣ್ಣುಮಕ್ಕಳ ತಂದೆ ತಾಯಂದಿರ ಸಂಕಷ್ಟಕ್ಕೆ ನೆರವಾಗುವ ಪುಣ್ಯ ಕೆಲಸವನ್ನು ಮಾಡುತ್ತಾ ಬಂದಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಕಿಟ್ ಗಳ ವಿತರಣೆ, ರಮ್ಝಾನ್ ತಿಂಗಳಲ್ಲಿ ರಮ್ಝಾನ್ ಕಿಟ್ ವಿತರಣೆ, ಸೌಹಾರ್ದ ಇಫ್ತಾರ್ ಕೂಟ ಮತ್ತು ಅನ್ನದಾನ, ವಾರ್ಷಿಕೋತ್ಸವದ ಸಂದರ್ಭ ಸಾವಿರಾರು ಬಡವರಿಗೆ ಅನ್ನದಾನ ಹೀಗೆ ನಿರಂತರವಾಗಿ ಬಡವರ ಸೇವೆ ಮಾಡುತ್ತಾ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ.



Join Whatsapp