ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ ಬಹುಕಾಲದ ಹಲವು ಬೇಡಿಕೆಗಳ ಪಟ್ಟಿಯೊಂದಿಗೆ SDPI ಜಿಲ್ಲಾಧ್ಯಕ್ಷರ ನೇತೃತ್ವದ ತಂಡವು ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ ಕಾರ್ಯಗತಗೊಳಿಸಲು ಆಗ್ರಹಿಸಿದೆ.
ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊಸತಾಗಿ ಪುತ್ತೂರು ಜಿಲ್ಲಾ ಘೋಷಣೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ, ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾದ ನಿಯಂತ್ರಣ, ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚನೆ, ಗ್ರಾಮಾಂತರ ಪ್ರದೇಶಗಳಲ್ಲಿ, ಮತ್ತು ತಾಲೂಕು ಕೇಂದ್ರಗಳಿಂದ ಮಂಗಳೂರಿಗೆ ಸಂಚರಿಸಲು ಹೆಚ್ಚುವರಿ ಸರಕಾರಿ ಬಸ್ಸುಗಳನ್ನು ನಿಯೋಜಿಸುವುದು, ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು, ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪದ ಕಾಮಗಾರಿಯನ್ನು ಕೂಡಲೇ ಪೂರ್ತಿ ಗೊಳಿಸುವುದು, ಮಂಗಳೂರು ಪ್ರತ್ಯೇಕ ರೈಲ್ವೇ ವಲಯ ಸ್ಥಾಪಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬ ಜಿಲ್ಲೆಯ ಹಲವು ಕಾಲದ ಪ್ರಮುಖ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸದ್ರಿ ಯೋಜನೆಗಳನ್ನು ಮುಂದಿನ ರಾಜ್ಯ ಮುಂಗಡ ಪತ್ರದಲ್ಲಿ ಘೋಷಿಸಬೇಕು ಮತ್ತು ಅದಕ್ಕೆ ಸೂಕ್ತ ಅನುದಾನವನ್ನು ಮೀಸಲಿಡಬೇಕೆಂದು SDPI ಉಸ್ತುವಾರಿ ಸಚಿವರನ್ನು ಒತ್ತಾಯಿಸಿದೆ, ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುದಾಗಿ SDPI ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಸಚಿವರನ್ನು ಭೇಟಿಯಾದ ನಿಯೋಗದಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೆ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿಗಳಾದ ಸುಹೈಲ್ ಖಾನ್ ಮತ್ತು ಅಶ್ರಫ್ ತಲಪಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಉಸ್ಮಾನ್ ಗುರುಪುರ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಸಿದ್ದೀಕ್ ಬೆಂಗರೆ ಉಪಸ್ಥಿತರಿದ್ದರು.