ಮಂಗಳೂರು: ಮಹಿಳೆಯೊಬ್ಬರು ಸ್ನಾನ ಮಾಡುವಾಗ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಸಂಘಪರಿವಾರದ ಕಾರ್ಯಕರ್ತನೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೆರೆ ಮನೆಯ ಮಹಿಳೆಯೊಬ್ಬರು ಬಾತ್ ರೂಮಿನಲ್ಲಿ ಸ್ನಾನ ಮಾಡುವುದನ್ನು ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂಬಾತ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ. ಈತ ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತ ಎಂದು ತಿಳಿದುಬಂದಿದೆ.
ಸುಮಂತ್ ವೀಡಿಯೊ ಮಾಡುತ್ತಿದ್ದ ವೇಳೆ ಕ್ಯಾಮರಾ ಕಂಡ ಮಹಿಳೆ ಕಿರುಚಾಡಿದ್ದಾರೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ವೀಡಿಯೊ ಮಾಡಿದ್ದ ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು!
ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆರೋಪಿಯ ಕುಟುಂಬದ ಸದಸ್ಯರೊಬ್ಬರಿಂದ ಪೊಲೀಸರು 50 ಸಾವಿರ ರೂ. ಮೌಲ್ಯದ ಬಾಂಡ್ ಪಡೆದು, ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಮೊಬೈಲ್ ನಲ್ಲಿ ಇಂತಹಾ ಹಲವು ನಗ್ನ ಚಿತ್ರಗಳು ಇದ್ದವು ಎಂಬ ಮಾಹಿತಿಯೂ ಲಭಿಸಿದೆ.