ಮಂಗಳೂರು: ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ರೆಮೊನಾ ಇವೆಟ್ಟಾ ಪರೇರಾ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಗೆ ಭಾಜನರಾಗಿದ್ದು, ಸೋಮಾವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಈ ಗೌರವವನ್ನು ಸ್ವೀಕರಿಸಿ ಜಿಲ್ಲೆಯ ಗಮನ ಸೆಳೆದಿದ್ದಾರೆ. ಅವರು ಭರತನಾಟ್ಯ ಕಲಾವಿದೆಯಾಗಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಮನೋಜ್ ಕರಿಪಳ್ಳ ಮತ್ತು ಸಂಧ್ಯಾ ಕೆ ಎಂಬವರ ಮಾರ್ಗದರ್ಶನದಲ್ಲಿ ಸೆಮಿ ಕ್ಲಾಸಿಕಲ್ ನೃತ್ಯವನ್ನು ಕಲಿಯುತ್ತಿರುವ ಇವರು ಕಂಟೆಂಪರರಿ, ವೆಸ್ಟರ್ನ್ ನೃತ್ಯವನ್ನು ಪ್ರಮೋದ್ ಕೋಡಿಕಲ್, ಪ್ರೀತೇಶ್ ಕುಮಾರ್ ಮತ್ತು ನಿಕಿ ಪಿಂಟೋ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಕುಚಿಪುಡಿ, ಕಥಕ್, ಜಾನಪದ, ಯಕ್ಷಗಾನ ಸೇರಿದಂತೆ ಇನ್ನಿತರ ನೃತ್ಯ ಮಾದರಿಯನ್ನು ಕರಗರ ಮಾಡಿಕೊಂಡಿರುವ ಅವರು ಹಲವು ಕಡೆಗಳಲ್ಲಿ ನೃತ್ಯದ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ಲಾಡಿಸ್ ಸೆಲಿನ್ ಮತ್ತು ದಿವಂಗರ ಎವರೆಸ್ಟ್ ಪಿರೇರಾ ದಂಪತಿಯ ಮಗಳಾದ ರೆಮೊನಾ ಎಂಬವರಿಗೆ ರೊನಾಲ್ಡೊ ರಾಕ್ಸನ್ ಎಂಬ ಕಿರಿಯ ಸಹೋದರನನ್ನು ಹೊಂದಿದ್ದಾರೆ. ಸದ್ಯ ಇವರು ನಂತೂರು ಪದವು ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ.
ಇದಲ್ಲದೆ 2019 ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿರುವ ಇವರು ಹಲವು ಕಾರ್ಯಕ್ರಮ ನಿರ್ವಹಿಸಿ ನೂರಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಬಾಲಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ನಡುವೆ ನರೇಂದ್ರ ಮೋದಿ ಡಿಜಿಟಲ್ ಮಾಧ್ಯಮದ ಮೂಲಕ 1 ಲಕ್ಷ ರೂ. ನಗದು ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಿದ್ದಾರೆ.