ಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು ಆರೋಪ | ಫಾದರ್ ಮುಲ್ಲರ್ ಆಸ್ಪತ್ರೆ ವಿರುದ್ಧ ಕುಟುಂಬಿಕರ ಆಕ್ರೋಶ!

Prasthutha|

ಹೊಟ್ಟೆಯಲ್ಲಿಯೇ ಮಗು ಸತ್ತಿದ್ದರೂ ನಿರ್ಲಕ್ಷ್ಯ!

- Advertisement -

ಮಂಗಳೂರು: ಹೆರಿಗೆಗೆಂದು ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ವೈದ್ಯರ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.

ವಿಟ್ಲ ಮೂಲದ ಸವಿತಾ (33) ಮೃತಪಟ್ಟ ಮಹಿಳೆಯಾಗಿದ್ದಾರೆ.
ಸವಿತಾ ಶುಕ್ರವಾರ ಬೆಳಿಗ್ಗೆ ಹೆರಿಗೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಕೆಲವೇ ಹೊತ್ತಲ್ಲಿ ಮಗುವಿನ ಹೃದಯ ಬಡಿತ ನಿಂತಿರೋದಾಗಿ ವೈದ್ಯರು ಹೇಳಿದ್ದರು ಎನ್ನಲಾಗಿದೆ.

- Advertisement -


ಆದರೆ, ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದ್ದರೂ ಸಂಜೆವರೆಗೂ ಮಗುವನ್ನು ಗರ್ಭದಿಂದ ಬೇರ್ಪಡಿಸುವ ಪ್ರಯತ್ನ ಮಾಡದ ಪರಿಣಾಮ ಸಾಯಂಕಾಲದ ವೇಳೆಗೆ ಗರ್ಭಿಣಿ ಸವಿತಾ ಕೂಡಾ ಮೃತಪಟ್ಟಿದ್ದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.


“ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಸಾವನ್ನಪ್ಪುವಂತಾಗಿದೆ. ಮಗು ಹೊಟ್ಟೆಯಲ್ಲಿಯೇ ಸತ್ತಿರೋದಾಗಿ ಹೇಳಿದ್ದರೂ ಸಿಸೇರಿಯನ್ ನಡೆಸದೇ ವೈದ್ಯರು ತಪ್ಪೆಸಗಿದ್ದಾರೆ” ಎಂದು ಮೃತ ಸವಿತಾ ಕುಟುಂಬಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ಕ್ರಮದ ಭರವಸೆ:
ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಕುಟುಂಬಿಕರು ಫಾದರ್ ಮುಲ್ಲರ್ ಆಸ್ಪತ್ರೆ ವಿರುದ್ಧ ತಿರುಗಿ ಬಿದ್ದಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ವೈದ್ಯರಿಂದ ವರದಿಯನ್ನು ಕೇಳಿದ್ದಾರೆ. ಅಲ್ಲದೇ, ಸಂತ್ರಸ್ತರ ದೂರನ್ನು ಆಧರಿಸಿ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

Join Whatsapp