ಮಂಗಳೂರು: ನಾಲ್ಕುವರೆ ತಿಂಗಳ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

Prasthutha|

ಮಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ತನ್ನ ನಾಲ್ಕೂವರೆ ತಿಂಗಳ ಮಗುವನ್ನು ನೀರು ತುಂಬಿದ ಪ್ಲಾಸ್ಟಿಕ್ ಮಗ್​ನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾಕ ಘಟನೆ ಗುಜ್ಜರಕೆರೆಯಲ್ಲಿ ನಡೆದಿದೆ. ಮುಹಮ್ಮದ್ ಉನೈಸ್ ಎಂಬವರ ಪತ್ನಿ ಫಾತಿಮಾ ರುಕಿಯಾ (23) ತನ್ನ ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

- Advertisement -

ಫಾತಿಮಾ ರುಖಿಯಾ ಮತ್ತು ಮುಹಮ್ಮದ್ ಉನೈಸ್ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. 2023 ಜುಲೈ 7 ರಂದು ಅವರಿಗೆ ಹೆರಿಗೆಯಾಗಿ ಗಂಡು ಮಗು ಜನಿಸಿತ್ತು. ಮಗುವಿಗೆ ಅಬ್ದುಲ್ಲಾ ಹೂದ್ ಎಂದು ಹೆಸರಿಡಲಾಗಿತ್ತು. ದುರದೃಷ್ಟವಶಾತ್, ಫಾತಿಮಾ ರುಖಿಯಾ ಹೆರಿಗೆಯಾದ ಬಳಿಕ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಮಾನಸಿಕವಾಗಿ ತೀವ್ರ ನೊಂದಿದ್ದ ರುಕಿಯಾರಿಗೆ ಮಂಗಳೂರಿನ ಅರೋಗ್ಯ ಕ್ಲಿನಿಕ್​ನಲ್ಲಿ ಮಾನಸಿಕ ವೈದ್ಯೆ ಡಾ. ಸುಪ್ರಿಯಾ ಅವರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚೇತರಿಕೆ ಕಂಡುಬಂದಿರಲಿಲ್ಲ. ಇಂದು ಮಧ್ಯಾಹ್ನದ ಹೊತ್ತು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್​ನಲ್ಲಿ ದುರಂತ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಟಬ್​ನಲ್ಲಿ ನೀರು ತುಂಬಿಸಿ ಬಳಿಕ ಮಗುವನ್ನು ಆ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ತಾನೂ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ಖಿನ್ನತೆಯ ಪರಿಣಾಮ ಈ ಕೃತ್ಯವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.



Join Whatsapp