ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ನಿನ್ನೆ ಸಂಚಲನ ಸೃಷ್ಟಿಸಿದ್ದ ಮಗು ಅದಲು-ಬದಲು ಪ್ರಕರಣದಲ್ಲಿ ಮಗುವಿನ ತಂದೆ ಮುಸ್ತಫಾ ಅವರು ನೀಡಿದ್ದ ದೂರಿನ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 363ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಕುಂದಾಪುರ ಮೂಲದ ದಂಪತಿಗಳಿಗೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಜನಿಸಿದಾಗ ಆಸ್ಪತ್ರೆಯ ಸಿಬ್ಬಂದಿಗಳು ಜನಿಸಿದ ಮಗು ಹೆಣ್ಣು ಮಗುವೆಂದು ಹೇಳಿದ್ದರು. ಅದಕ್ಕೆ ಪೂರಕವಾದ ದಾಖಲೆಗಳನ್ನು ಕೂಡಾ ನೀಡಿದ್ದರು. ಮಗುವಿನ ಆರೋಗ್ಯ ಪರಿಸ್ಥಿತಿ ತೀರಾ ಹದೆಗೆಟ್ಟಿರುವುದರಿಂದ ಮಗುವನ್ನು ಎನ್ ಐ ಸಿ ಯುಗೆ ದಾಖಲಿಸಬೇಕೆಂದುಹೇಳಿದ್ದ ಸಿಬ್ಬಂದಿಗಳು ಆ ಬಳಿಕ ಮಗುವನ್ನು ನೋಡಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. 18 ದಿನಗಳ ಬಳಿಕ ಪೋಷಕರು ಡಿಸ್ಚಾರ್ಜ್ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಊರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಅದಲು ಬದಲಾಗಿರುವುದನ್ನು ಗಮನಿಸಿದ್ದಾರೆ.
ಇದೀಗ ಪೊಲೀಸರು ಪ್ರಕರಣ ದಾಖಲಿಸಿರುವುದರಿಂದ ಕಾನೂನು ರೀತ್ಯಾ ಮಗುವಿನ ಪೋಷಕರ ಕುರಿತು ಸತ್ಯಾಸತ್ಯತೆ ಬಯಲಾಗಲಿದೆ. ಮುಂದಿನ ಸೋಮವಾರದಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪೋಷಕರ ಮತ್ತು ಮಗುವಿನ ರಕ್ತದ ಮಾದರಿ ಸಂಗ್ರಹ ನಡೆಯಲಿದ್ದು, ಆ ಬಳಿಕ ಅದನ್ನು ಡಿ ಎನ್ ಎ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.