ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು (ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಘಟಕ) ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಸ್ಥಾಪಿಸಲಾದ ಫಾದರ್ ಮುಲ್ಲರ್ ಥಲಸೇಮಿಯಾ ಕೇಂದ್ರದ ಉದ್ಘಾಟನೆ ನೆರವೇರಿತು.
ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಸಾಮಾನ್ಯ ವಾರ್ಡ್ ‘ಎಲ್ ವಾರ್ಡ್’ನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮವು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಡೆಯಿತು.
ಸಮಾರಂಭದಲ್ಲಿ ಕೆಎಂಸಿ ಮಣಿಪಾಲದ ವೈದ್ಯಕೀಯ ತಳಿಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ವಿವೇಕಾನಂದ ಭಟ್ ಮುಖ್ಯ ಅತಿಥಿಯಾಗಿದ್ದು, ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಸಮಿತಿ, ಪೀಡಿಯಾಟ್ರಿಕ್ಸ್ ವಿಭಾಗ ಮತ್ತು ಐ.ಎಚ್.ಬಿ.ಟಿ. ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜೀವನ್ ಅವರು ಪ್ರಸ್ತಾವನೆಗೈದು ಥಲಸ್ಸೆಮಿಯಾ ಕೇಂದ್ರದ ಅಗತ್ಯತೆಯ ಕುರಿತು ವಿವರಿಸಿದರು. ನಿರ್ದೇಶಕರು ಪ್ರಾರ್ಥನೆಯನ್ನು ಹಾಗೂ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಬಿ. ಮಿನೇಜಸ್ ಸ್ತುತಿಗೀತೆಗಳನ್ನು ಹಾಡಿದರು.
ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಅವಭಾರತ ಅವರು ಥಲಸ್ಸೆಮಿಯಾ ಕೇಂದ್ರದ ಕುರಿತು ವಿವರಿಸಿ ಥೆಲಸೇಮಿಯಾದಿಂದ ಬಳಲುತ್ತಿರುವ ಜನರಿಗೆ ಉಚಿತ ಆರೈಕೆ ನೀಡುವಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ಡಾ.ಚಂದನಾ ಪೈ ಥೆಲಸ್ಸೇಮಿಯಾ ಕೇಂದ್ರದ ಅಗತ್ಯ ಮತ್ತು ಅನಾರೋಗ್ಯ ಪೀಡಿತ ರೋಗಿಗಳಿಗೆ ಇದರಿಂದ ಆಗುವ ಪ್ರಯೋಜನ ವಿವರಿಸಿ, ಜೀವಗಳನ್ನು ಉಳಿಸಲು ಆಗಾಗ್ಗೆ ರಕ್ತದಾನ ಮಾಡಲು ಜನರನ್ನು ಒತ್ತಾಯಿಸಿದರು. ಥೆಲಸ್ಸೆಮಿಯಾವು ಅಸಹಜ ಹಿಮೋಗ್ಲೋಬಿನ್ ಉತ್ಪಾದನೆಯಿಂದ ಆಗುವ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಇದು ತೀವ್ರವಾದ ರಕ್ತಹೀನತೆಗೆ ಕಾರಣವಾಗುತ್ತದೆ ಎಂದರು. ಈ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಕೇಂದ್ರವನ್ನು ಹಣದ ಕೊರತೆಯಿಂದಾಗಿ ಕ್ಯಾಂಪಸ್‌ಗೆ ಸ್ಥಳಾಂತರಿಸ ಬೇಕಾಯಿತು ಎಂದು ಹೇಳಿದರು
ಐ.ಎಚ್.ಬಿ.ಟಿ. ಯ ಇಮ್ಯುನೊಹೆಮೊಟಾಲಜಿ ಮತ್ತು ರಕ್ತ ವರ್ಗಾವಣೆಯ ಮುಖ್ಯಸ್ಥರಾದ ಡಾ. ಕಿರಣ ಪೈಲೂರ್ ಅವರು ಥೆಲಸ್ಸೆಮಿಯಾ ರೋಗಿಗಳಿಗೆ ನಿರಂತರ ರಕ್ತ ಪೂರೈಕೆಯನ್ನು ಏರ್ಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಪೀಡಿಯಾಟ್ರಿಕ್ ವಿಭಾಗದ ಹೆಮಟಾಲಜಿಸ್ಟ್ ಆಂಕೊಲಾಜಿಸ್ಟ್ ಡಾ. ಚಂದನ ಪೈ ಅವರ ಪರಿಣತಿಯಲ್ಲಿ ಮತ್ತು ರೆ.ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮತ್ತು ಆಡಳಿತಾಧಿಕಾರಿ ರೆ. ಫಾ. ಜೀವನ್ ಜಾರ್ಜ್ ಸಿಕ್ವೇರಾ ನೇತೃತ್ವದಲ್ಲಿ ಥೆಲಸ್ಸೆಮಿಯಾ ಕೇಂದ್ರವು ಪ್ರಾರಂಭಗೊಂಡಿದೆ. ಈ ಕೇಂದ್ರವು 150 ಕ್ಕೂ ಹೆಚ್ಚು ಮಕ್ಕಳು ಮತ್ತು ವಯಸ್ಕರಿಗೆ ಪ್ರಯೋಜನವನ್ನು ನೀಡಲಿದೆ. ತಲಸ್ಸೆಮಿಯಾದಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಗೆ ರಕ್ತ ಮತ್ತು ಅದರ ಘಟಕಗಳನ್ನು ಒದಗಿಸಲು ಸುಮಾರು ಎರಡರಿಂದ ಮೂರು ದಾನಿಗಳ ಅಗತ್ಯವಿದೆ. ಉಚಿತ ರಕ್ತ ವರ್ಗಾವಣೆಯ ಜತೆಗೆ ಉಚಿತ ಔಷಧಿ ಮತ್ತು ಸಮಾಲೋಚನೆಯನ್ನು ಕೂಡಾ ನೀಡಲಾಗುತ್ತದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ನಡುವಿನ ಸಹಯೋಗವು ಥೆಲಸ್ಸೆಮಿಯಾ ವಿರುದ್ಧ ಹೋರಾಡುತ್ತಿರುವವರಿಗೆ ಭರವಸೆಯ ಕಿರಣವಾಗಿದ್ದು, ಇದು ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.