ಮಂಗಳೂರು| ಸ್ಮಾರ್ಟ್ ಸಿಟಿ ನೆಪದಲ್ಲಿ ಸಾರ್ವಜನಿಕರಿಗೆ ಸಂಚಕಾರ; ಅಧಿಕಾರಿ ವಲಯದ ಅಜಾಗರೂಕತೆ

Prasthutha|

ಮಂಗಳೂರು: ಸ್ಮಾರ್ಟ್ ಸಿಟಿಯಾಗಿ ಮಾರ್ಪಡುತ್ತಿರುವ ಮಂಗಳೂರು ಮಹಾನಗರಕ್ಕೆ ಗುಜರಿ ತ್ಯಾಜ್ಯ ದೊಡ್ಡ ಸವಾಲಾಗಿದೆ. ಬಂದರು ವ್ಯಾಪ್ತಿಯ ರಸ್ತೆಗಳ ಇಕ್ಕೆಲಗಳಲ್ಲಿ ಗುಜರಿಗಳ ರಾಶಿ ಒಂದೆಡೆಯಾದರೆ, ಮತ್ತೊಂದು ಕಡೆಯಲ್ಲಿ ಪೊಲೀಸ್‌ ಠಾಣೆಯ ಎದುರು ವಶಪಡಿಸಿಕೊಳ್ಳಲಾದ ವಾಹನಗಳು ಧೂಳು ತಿನ್ನುತ್ತಿವೆ.

- Advertisement -

ಮಳೆಗಾಲದಲ್ಲಿ ಈ ಗುಜರಿ ರಾಶಿಯಲ್ಲಿರುವ ಟಯರ್‌, ವಾಹನಗಳ ಬಿಡಿಭಾಗಗಳು ಮಳೆ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿದ್ದು, ಡೆಂಗ್ಯು, ಮಲೇರಿಯಾ ಮುಂತಾದ ರೋಗ ಹರಡುವ ಸೊಳ್ಳೆಗಳಿಗೆ ಆಶ್ರಯ ತಾಣಗಳಾಗುತ್ತಿವೆ. ಮಳೆಗಾಲ ಸಮೀಪಿಸುತ್ತಲೇ ಬೀದಿಬೀದಿಗಳಲ್ಲಿ ರೋಗದ ಬಗ್ಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿರುವ ಮಹಾ ನಗರ ಪಾಲಿಕೆ ಆಡಳಿತದವರು ‘ಸ್ವಚ್ಛ ಮಂಗಳೂರು’ ಪರಿಕಲ್ಪನೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿರುವ ಈ ಗುಜರಿ ತ್ಯಾಜ್ಯ ಮತ್ತು ವಾಹನಗಳನ್ನು ವರ್ಷಕ್ಕೊಮ್ಮೆ ವಿಲೇವಾರಿ ಮಾಡುವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನಗರದ ಮುಖ್ಯ ರಸ್ತೆಗಳಲ್ಲಿ ನಿತ್ಯ ಸಂಚರಿಸುತ್ತಿದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನಗರದ ವ್ಯಾಪಾರಸ್ಥರು ದೂರುತ್ತಿದ್ದಾರೆ.

ನಗರದ ಪೊಲೀಸ್‌ ಠಾಣೆಗಳ ಸುತ್ತಮುತ್ತ, ಕೆಲವು ಸರಕಾರಿ ಇಲಾಖೆಗಳ ಮುಂಭಾಗದಲ್ಲಿಹಳೆ ವಾಹನಗಳು, ವಶಪಡಿಸಲ್ಪಟ್ಟ ವಾಹನಗಳು ರಾಶಿ ಬಿದ್ದಿವೆ. ಸಾರಿಗೆ ಇಲಾಖೆ, ಪೊಲೀಸರು ವಶಪಡಿಸಿದ ವಾಹನಗಳನ್ನು ನಗರದಲ್ಲಿ ನಿಲ್ಲಿಸಲು ಸಮರ್ಪಕ ವ್ಯವಸ್ಥೆ ಇಲ್ಲದೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ. ಕದ್ರಿ ಶಿವಭಾಗ್‌ ಸೇರಿದಂತೆ ಕೆಲವು ಸ್ಥಳಗಳಲ್ಲಿ ಹಳೆಯ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಿದ ಪರಿಣಾಮ ಅಪಘಾತಗಳುಂಟಾಗುತ್ತಿವೆ. ನಗರದ ಬಂದರು, ಕದ್ರಿ, ಉರ್ವ, ಬರ್ಕೆ, ಕಂಕನಾಡಿ ಸಂಚಾರ, ಕಾವೂರು ಸೇರಿದಂತೆ ನಾನಾ ಠಾಣೆಗಳಲ್ಲಿ ವಶಪಡಿಸಲ್ಪಟ್ಟ ವಾಹನಗಳ ಮೇಲೆ ಪೊದೆ, ಬಳ್ಳಿಗಳು ಬೆಳೆದಿದೆ.

- Advertisement -

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ವಶಪಡಿಸಲ್ಪಟ್ಟ ಮರಳು ಲಾರಿ ಸೇರಿದಂತೆ ಇತರ ವಾಹನಗಳನ್ನು ಒಂದೇ ಕಡೆ ಪಾರ್ಕ್ ಮಾಡಲು ಯೋಗ್ಯವಾದ ಸೂಕ್ತ ಟರ್ಮಿನಲ್‌ ಯಾರ್ಡ್‌ ಬೇಕಾಗಿದೆ  ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್‌ ಆಗ್ರಹಿಸಿದ್ದಾರೆ.

ಸ್ಮಾರ್ಟ್‌ ಸಿಟಿಗೆ ಅನುಮತಿ ದೊರೆತಾಗ ಮೊದಲು ಮೀನುಗಾರಿಕಾ ಧಕ್ಕೆ, ಹಳೆ ಬಂದರು ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಜನೆ ಹಾಕಿದ್ದರು. ಆದರೆ ಈಗ ಆ ಪ್ರದೇಶಗಳೆಲ್ಲಾ ನಿರ್ಲಕ್ಷ್ಯಕ್ಕೊಳಗಾಗಿದ್ದು, ಗುಜರಿ ರಾಶಿಗಳು ಹಾಗೆಯೇ ಇವೆ. ಕಾಟಾಚಾರಕ್ಕೆ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಕಾಮಗಾರಿ ನಡೆಯುತ್ತಿದೆ ಎಂದು  ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Join Whatsapp