ಮಂಗಳೂರು | ಪ್ರೊ.ನರೇಂದ್ರ ನಾಯಕ್ ಅಂಗರಕ್ಷಕ ರದ್ದು: ಅನಾಹುತಗಳಿಗೆ ಪೊಲೀಸ್ ಇಲಾಖೆ, ಸರಕಾರ ನೇರ ಹೊಣೆ- ಡಿವೈಎಫ್’ಐ ಎಚ್ಚರಿಕೆ

Prasthutha|

ಮಂಗಳೂರು: ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿರುವ ಮೂಡನಂಬಿಕೆಗಳನ್ನು ಹೋಗಲಾಡಿಸಲು ನಿರಂತರ ಪವಾಡ ರಹಸ್ಯ ಬಯಲಿನಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುತ್ತಿದ್ದ ಪ್ರೊ ನರೇಂದ್ರ ನಾಯಕ್ ಅವರು ಬಲಪಂಥೀಯ ಉಗ್ರಗಾಮಿಗಳ ದಾಳಿಗೊಳಗಾಗುವ ಹಿಟ್ ಲೀಸ್ಟ್ ನಲ್ಲಿ ಇರುವ ಸಲುವಾಗಿ ಈವರೆಗೆ ನೀಡಲಾಗುತ್ತಿದ್ದ ಅಂಗರಕ್ಷಕ ಭದ್ರತೆಯನ್ನು ಪೊಲೀಸ್ ಇಲಾಖೆ ಏಕಾಏಕಿ ರದ್ದುಗೊಳಿಸಿರುವುದನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಅವರ ಜೀವಕ್ಕೆ ತೊಂದರೆಯಾಗುವಂತಹ ಅನಾಹುತಗಳಿಗೆ ಪೊಲೀಸ್ ಇಲಾಖೆ, ಸರಕಾರವೇ ನೇರ ಹೊಣೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಎಚ್ಚರಿಸಿದ್ದಾರೆ.

- Advertisement -


ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮಗಳನ್ನು ನಿರಂತಹ ಹಮ್ಮಿಕೊಳ್ಳುವ ಮೂಲಕ ಮೂಢನಂಬಿಕೆ ಹೋಗಲಾಡಿಸುವ ಮತ್ತು ಮೂಢನಂಬಿಕೆ ಹೆಸರಲ್ಲಿ ಅನ್ಯಾಯ ಎಸಗುತ್ತಿದ್ದ ಕಪಟ ಜೋತಿಷ್ಯರ ವಿರುದ್ದ ರಾಜಿರಹಿತ ಹೋರಾಟಗಳನ್ನು ದೇಶದುದ್ದಗಲಕ್ಕೂ ನಡೆಸುತ್ತಾ ಬಂದಿದ್ದಾರೆ. ಈ ರೀತಿ ವೈಜ್ಞಾನಿಕ ಮನೋಭಾವ ಬೆಳೆಸುವ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಲಪಂಥೀಯ ಸಂಘಟನೆಗಳಿಗೆ ಸೇರಿದ ಗುಂಪುಗಳು ಬಲಿ ಪಡೆದಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ನರೇಂದ್ರ ನಾಯಕರ ಒಡನಾಡಿಯಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು, ಹೋರಾಟಗಾರರನ್ನು ಗುಂಡಿಕ್ಕಿ ಸಾಯಿಸಿದ ಘಟನೆಗಳು ನಡೆಯುವ ಸಂದರ್ಭದಲ್ಲೇ ನರೇಂದ್ರ ನಾಯಕರಂತವರ ಹೆಸರು ಅಂತಹ ಕೊಲೆಗಟುಕರ ಹಿಟ್ ಲೀಸ್ಟಲ್ಲಿ ಇತ್ತೆಂದು ಗುಪ್ತಚರ ಇಲಾಖೆಗೆ ಮಾಹಿತಿಗಳು ಸಿಕ್ಕಿದ್ದವು. ಪ್ರೊ. ನರೇಂದ್ರ ನಾಯಕರಿಗೂ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಯಾವುದೇ ಷರತ್ತುಗಳಿಲ್ಲದೆ ಅಂಗರಕ್ಷಕ ಭದ್ರತೆಯನ್ನು ಒದಗಿಸಿಕೊಟ್ಟಿದ್ದವು. ಭದ್ರತಾ ಅಂಗರಕ್ಷಕ ಇರುವ ಸಂದರ್ಭದಲ್ಲೇ ಪ್ರೊ. ನರೇಂದ್ರ ನಾಯಕರ ಮೇಲೆ ಹಲವು ಬಾರಿ ಹಲ್ಲೆ ನಡೆಸುವ, ಜೀವಕ್ಕೆ ಹಾನಿ ಮಾಡುವ ಪ್ರಯತ್ನಗಳು ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.

ಇತ್ತೀಚೆಗೆ 2016 ರಲ್ಲಿ ಕೊಲೆಯಾದ ಆರ್’ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ಬಲಿಪಡೆದ ಸೂತ್ರದಾರರ ಬಂಧನಗೊಳಿಸಲು ನಡೆಸಿದ ಹೋರಾಟದ ನೇತೃತ್ವ ವಹಿಸಿದ್ದ ಪ್ರೊ. ನರೇಂದ್ರನಾಯಕ್ ಅವರಿಗೆ ನಿರಂತರ ಜೀವ ಬೆದರಿಕೆ ಒಡ್ಡುವ, ವಾಹನಗಳಿಗೆ ಹಾನಿ ಮಾಡುವಂತಹ ಪ್ರಯತ್ನಗಳು ನಡೆದಿವೆ. ಸದ್ಯ ನ್ಯಾಯಾಲಯದಲ್ಲಿ ವಿನಾಯಕ ಬಾಳಿಗೆ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಆರೋಪಿಗಳು ಸಾಕ್ಷಿದಾರರನ್ನು ಬೆದರಿಸುವ, ದಿಕ್ಕು ತಪ್ಪಿಸುವ ಪ್ರಯತ್ನಗಳು ಇರುವುದರಿಂದ ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಪ್ರೊ. ನರೇಂದ್ರ ನಾಯಕರ ಅಂಗರಕ್ಷಕ ಭದ್ರತೆಯನ್ನು ರದ್ದುಗೊಳಿಸಿರುವುದರ ಬಗ್ಗೆ ಹಲವು ಅನುಮಾನಗಳು ಎದ್ದು ಕಾಣುತ್ತಿವೆ. ಪ್ರೊ. ನರೇಂದ್ರ ನಾಯಕರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈವರೆಗೆ ನೀಡಲಾಗುತ್ತಿದ್ದ ಅಂಗರಕ್ಷಕ ಭದ್ರತೆಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೆ ಈ ಹಿಂದಿನಂತೆ ಯಾವುದೇ ಷರತ್ತುಗಳಿಲ್ಲದ ಅಂಗರಕ್ಷಕ ಭದ್ರತೆಯನ್ನು ಮುಂದುವರಿಸಬೇಕು ಎಂದು ಡಿವೈಎಫ್’ಐ ದ.ಕ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ ಎಂದು ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp