ಮಂಗಳೂರು: ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನು ಗಾಂಜಾ ಕೇಸಿನಲ್ಲಿ ಬಂಧಿಸಲಾಗಿದ್ದು, ಪ್ರಕರಣದ ಸರಿಯಾದ ತನಿಖೆ ನಡೆಸುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ರಾಜೀವ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಡ್ರಗ್ ಪೆಡ್ಲರ್ ಗಳು ಹಾಗೂ ಗ್ರಾಹಕರ ಪರವಾಗಿಲ್ಲ. ಆದರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಮತ್ತು ಅವರನ್ನು ಬಂಧಿಸುವ ಮೊದಲು ಕಾನೂನು ಜಾರಿಗೊಳಿಸುವ ಸಂಸ್ಥೆಗಳು ತನಿಖೆಯನ್ನು ಸರಿಯಾದ ರೀತಿಯಲ್ಲಿ ಮತ್ತು ನ್ಯಾಯಯುತವಾಗಿ ನಡೆಸಿವೆಯೇ? ತಮ್ಮ ಕರ್ತವ್ಯವನ್ನು ವಿವೇಚನೆಯಿಂದ ನಿರ್ವಹಿಸಿವೆಯೇ ಎಂದು ಪ್ರಶ್ನಿಸಿದರು.
ಮಾದಕ ವಸ್ತು ಕಳ್ಳಸಾಗಣೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳ ಶಿಸ್ತಿನ ವ್ಯವಹಾರ ಸಂತಸ ಪಡುವಂತಿದೆ. ಆದರೆ ಮಾದಕ ವ್ಯಸನಿಗಳ ವಿಚಾರವಾಗಿ ನಾವು ಮಾತನಾಡುತ್ತಿದ್ದೇವೆ. 1985ರ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ (NDPS) ನ ಸೆಕ್ಷನ್ 64ಎ ಪ್ರಕಾರ ಚಿಕಿತ್ಸೆಗಾಗಿ ವ್ಯಸನಿಗಳಿಗೆ ಕಾನೂನು ಕ್ರಮದಿಂದ ವಿನಾಯಿತಿ ಇರುತ್ತದೆ. ಅಲ್ಲದೆ ಅವರು ಪುನರ್ವಸತಿ ಕೇಂದ್ರಗಳಿಗೆ ಹೋಗಲು ಸಿದ್ದರಾಗಿದ್ದರೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಕಾನೂನಿನಲ್ಲಿ ಇಂತಹ ಅವಕಾಶವಿದ್ದರೂ, ಸಂಸ್ಥೆ ಯಾಕೆ ಈ ಕ್ರಮಕ್ಕೆ ಮುಂದಾಗಿಲ್ಲ ಎಂದವರು ಪ್ರಶ್ನಿಸಿದರು.
ಸರಿಯಾದ ರೀತಿಯಲ್ಲಿ ಜಾರಿ ಪ್ರಾಧಿಕಾರವು ತನಿಖೆ ನಡೆಸಬೇಕು. ಪ್ರಕರಣವನ್ನು ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಹಿಸಿಕೊಳ್ಳಬೇಕು. ಅಥವಾ ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳು ಪ್ರಕರಣದ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ನಾವು ಹೈಕೋರ್ಟ್’ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಒತ್ತಾಯಿಸಿದ್ದಾರೆ.