ಮಂಗಳೂರು: ಇಲ್ಲಿನ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯ ಮುಸ್ಲಿಂ ಉದ್ಯೋಗಿಯೋರ್ವನಿಗೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದೆ.
ಗ್ರಾಹಕರಂತೆ ಬಂದ ಸುಮಾರು 20 ಮಂದಿ ಇದ್ದ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿತ್ತು.
ಚಿನ್ನಾಭರಣ ಮಳಿಗೆಯ ಉದ್ಯೋಗಿ, ಉಳ್ಳಾಲ ನಿವಾಸಿಯಾದ ಮುಸ್ಲಿಂ ಯುವಕ ಅದೇ ಮಳಿಗೆಯಲ್ಲಿ ‘ರಿಸೆಪ್ಷನಿಸ್ಟ್’ ಆಗಿರುವ ಚಿಕ್ಕಮಗಳೂರು ಜಿಲ್ಲೆಯ ಹಿಂದೂ ಯುವತಿಯೋರ್ವಳನ್ನು ಲವ್ ಜಿಹಾದ್ ನಡೆಸಲು ಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿತ್ತು.
“ಕದ್ರಿ ಠಾಣೆಯಲ್ಲಿ ಹಲ್ಲೆಗೊಳಗಾದ ಮುಸ್ಲಿಂ ಯುವಕ, ಯುವತಿಯ ಪೋಷಕರು ಹಾಗೂ ಚಿನ್ನಾಭರಣ ಮಳಿಗೆಯವರು ನೀಡಿದ ದೂರು ಸೇರಿ ಮೂರು ದೂರು ದಾಖಲಾಗಿದೆ. ಹಲ್ಲೆ ಮತ್ತು ಗಲಾಟೆ ನಡೆಸಿದ ಬಗ್ಗೆ ಯುವಕ ದೂರು ನೀಡಿದ್ದಾನೆ. ಯುವತಿಯ ತಾಯಿಯು ತನ್ನ ಮಗಳ ಮೇಲೆ ಯುವಕ ದೌರ್ಜನ್ಯ ಎಸಗಿ, ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಚಿನ್ನಾಭರಣ ಮಳಿಗೆಯವರು, ಅಕ್ರಮ ಪ್ರವೇಶ ಮಾಡಿ ದಾಂಧಲೆಗೈದ ಬಗ್ಗೆ ಪ್ರತ್ಯೇಕ ದೂರು ನೀಡಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ. ಈ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.