ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋ ನಿಗೂಢವಾಗಿ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಇದೀಗ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಘಟನೆಗೆ ಸಂಬಂಧಿಸಿ ಐಪಿಸಿ ಸೆಕ್ಷನ್ 120ಬಿ, 307ರ ಅಡಿ ಮತ್ತು ಸ್ಫೋಟ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಹೊರ ವಲಯದ ನಾಗುರಿ ಸಮೀಪ ಆಟೋದಲ್ಲಿ ಸ್ಫೋಟ ನಡೆದಿದ್ದು, ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಡಿಜಿಪಿ ಪ್ರವೀಣ್ ಸೂದ್, ಇದು ಅನಿರೀಕ್ಷಿತವಾಗಿ ನಡೆದ ಸ್ಫೋಟವಲ್ಲ. ಇದೊಂದು ಉಗ್ರ ಕೃತ್ಯ. ಉದ್ದೇಶಪೂರ್ವಕವಾಗಿ ಸಾವು ನೋವು, ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಎಂದು ತಿಳಿಸಿದ್ದರು. ಈ ಮಧ್ಯೆ ಸದ್ಯ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.