ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್.ಡಿ.ಕುಮಾರಸ್ವಾಮಿ

Prasthutha|

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎನ್ನುವುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಕೊನೆಪಕ್ಷ ಈಗಲಾದರೂ ಸತ್ಯ ಹೊರಬಂತಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟಿದ್ದಾರೆ.

- Advertisement -

ಸಂಸದೆ ಸುಮಲತಾ ಅವರನ್ನು ಗೆಲ್ಲಿಸಿ ತಪ್ಪು ಮಾಡಿದ್ದೇವೆ ಎಂದು ನಾಗಮಂಗಲದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸತ್ಯ ಹೊರಗೆ ಬಂತಲ್ಲ, ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಮಂಡ್ಯದಲ್ಲಿ, ತುಮಕೂರಿನಲ್ಲಿ ಏನೀನು ಮಾಡಿದರು ಅನ್ನುವುದು ಈಗ ಅವರ ಬಾಯಿಂದಲೇ ಸತ್ಯ ಹೊರಗೆ ಬಂದಿದೆ. ಈಗ ಅದೆಲ್ಲ ಮುಗಿದು ಹೋದ ಅಧ್ಯಾಯ. ನನ್ನ ಸರಕಾರ ತೆಗೆದವರರೇ ಅವರು ಎಂದು ಅವರು ಹೇಳಿದರು.

ಶಾಸಕರನ್ನೇ ನೋಡಿಲ್ಲ, ಭೇಟಿ ಮಾಡಿಲ್ಲ ಅಂತ ಹೇಳುತ್ತಾರೆ ಇವರು. 19,000 ಕೋಟಿ ಅನುದಾನವನ್ನು ಕಾಂಗ್ರೆಸ್ ಪಕ್ಷದ 78 ಜನ ಶಾಸಕರಿಗೆ ನೀಡಿದ್ದೇನೆ. ಶಾಸಕರನ್ನು ಭೇಟಿ ಮಾಡದೇ ಇಷ್ಟು ಅನುದಾನ ನೀಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

- Advertisement -

ಕೃಷ್ಣ ಕಚೇರಿಯಲ್ಲಿ ದಿನಕ್ಕೆ 5 ಸಾವಿರ ಜನ ಸೇರಿರುತ್ತಿದ್ದರು. ಸಾವಿರಾರು ಜನರನ್ನು ಭೇಟಿಯಾದ ಮೇಲೆ ಶಾಸಕರನ್ನು ಕೂಡ ಭೇಟಿಯಾಗಿ 10-15 ಅಭಿವೃದ್ಧಿ ಸಭೆಗಳನ್ನು ನಡೆಸುತ್ತಿದ್ದೆ. ನಾನೇನು ನಿದ್ದೆ ಮಾಡುತ್ತಿದೀನಾ? ತಪ್ಪು ಮಾಡಿದವರು ಅವರು, ಈಗ ನನ್ನ ಮೇಲೆ ಅಪಾದನೆ ಮಾಡ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು ಮಾಜಿ ಮುಖ್ಯಮಂತ್ರಿಗಳು.

ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆ ಚರ್ಚೆ ಮಾಡುವ ಅಂಶಗಳನ್ನು ಇಟ್ಟುಕೊಂಡಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಕೆದಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದ ಅವರು; ಸ್ವಲ್ಪ ದಿನ ವಿಷಕನ್ಯೆ, ವಿಷಸರ್ಪ ಇತ್ತು, ಈಗ ಬಜರಂಗಿ ವಿಚಾರ ತಗೊಂಡು ಹೋಗ್ತಿದ್ದಾರೆ. ವೋಟಿಂಗ್ ದಿನ ಈ ವಿಷಯ ಮುಗಿಯುತ್ತದೆ. ಇವರು ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ನಾನು ವಿಷಯಧಾರಿತವಾಗಿ ಚುನಾವಣೆ ಎದುರಿಸುತ್ತೇನೆ. ನನಗೆ ಆರ್ಥಿಕ ಶಕ್ತಿ ಇದ್ದಿದ್ದರೆ 130 ರಿಂದ 140 ಸೀಟು ಗೆಲ್ಲುತ್ತಿದ್ದೆ. ಹಣ ಇಲ್ಲದೆ ಹಿನ್ನೆಡೆ ಆಗಿದೆ. ಜನ ದುಡ್ಡಿಗೆ ಮರಳಾಗುವುದಿಲ್ಲ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿ ತವರು ಕ್ಷೇತ್ರ ಶಿಗ್ಗಾವಿ ಕ್ಷೇತ್ರದಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನತಾದಳಕ್ಕೆ ಉತ್ತಮ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗಳನ್ನು ಸಂಪರ್ಕ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಮಾಜಿ ಮುಖ್ಯಮಂತ್ರಿ, ಅದರಲ್ಲಿ ಸಂಶಯವೇ ಇಲ್ಲ. ಸಮೀಕ್ಷೆಗಳು ಏನೇ ಇದ್ದರೂ ಅದು ಕೃತಕವಾದುದು. ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಎರಡೂ  ಪಕ್ಷಗಳು ಯಾವುದೇ ಕಾರಣಕ್ಕೂ 100 ಸ್ಥಾನ ದಾಟೋಕೆ ಸಾಧ್ಯವಾಗಿಲ್ಲ ಎಂದರು ಅವರು.



Join Whatsapp