ಮಂಡ್ಯ: ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಅಲ್ಲಿ ನಿರ್ಮಿಸಲಾಗಿದ್ದ ವಿವಾದಿತ ಧ್ವಜಸ್ತಂಭವನ್ನೇ ತೆರವುಗೊಳಿಸುವಂತೆ ಆಡಳಿತಾಧಿಕಾರಿ ಆದೇಶ ನೀಡಿದ್ದಾರೆ.
ಗ್ರಾಮದ ವಿವಾದಿತ ಸ್ಥಳದಲ್ಲಿರುವ ಧ್ವಜಸ್ತಂಭವನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿ ಆಸ್ತಿಯನ್ನು ಸುಪರ್ದಿಗೆ ಪಡೆದು ಯತಾಸ್ಥಿತಿ ಕಾಪಾಡಲು ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ. ಬಾಬು ಅವರು ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
ಗೌರಿಶಂಕರ ಸೇವಾಟ್ರಸ್ಟ್‌ನವರು ಷರತ್ತುಗಳನ್ನು ಉಲ್ಲಂಘಿಸಿ ಧ್ವಜಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಿರುವುದು ನಿಯಮಬಾಹಿರವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಸಂಬಂಧಿಸಿದವರನ್ನು ಕರೆಯಿಸಿ ತಿಳುವಳಿಕೆ ಹೇಳಿದರೂ ಸಹ ಕೇಸರಿ ಧ್ವಜವನ್ನು ಯತಾಸ್ಥಿತಿಯಲ್ಲಿ ಹಾರಿಸಲಾಗಿದೆ ಎಂಬ ಅಂಶವನ್ನು ತಿಳಿಸಲಾಗಿತ್ತು. ಆದರೆ ಅವರು ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅಧಿನಿಯಮ 57ರ ಪ್ರಕರಣ 237ನೇ ಪ್ರಕರಣದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕಾಗಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಯಾದ ನನಗೆ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಶಿಫಾರಸ್ಸು ಮಾಡಿದ್ದರ ಜೊತಗೆ ಸಂಬಂಧಿಸಿದ ಗ್ರಾ.ಪಂ. ಪಿಡಿಓಗೂ ಸಹ ಧ್ವಜಸ್ತಂಭ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಾ.ಪಂ. ಆಡಳಿತಾಧಿಕಾರಿ ಎಂ. ಬಾಬು ಆದೇಶದಲ್ಲಿ ತಿಳಿಸಿದ್ದಾರೆ.