UEFA ಚಾಂಪಿಯನ್ಸ್ ಲೀಗ್: ಮ್ಯಾಂಚೆಸ್ಟರ್ ಸಿಟಿ ಎದುರು ಮಂಡಿಯೂರಿದ PSG !

Prasthutha|

ಮ್ಯಾಂಚೆಸ್ಟರ್: MNM ಖ್ಯಾತಿಯ ಮೆಸ್ಸಿ, ನೇಮರ್ ಎಂಬಾಪೆಯನ್ನು ಒಳಗೊಂಡ ಜಗತ್ತಿನ ಶ್ರೇಷ್ಟ ಮೂವರು ಫಾರ್ವರ್ಡ್ ಆಟಗಾರರಿದ್ದ ಪ್ಯಾರಿಸ್ ಸೇಂಟ್ ಜರ್ಮನ್ – PSG ತಂಡವನ್ನು ಮ್ಯಾಂಚೆಸ್ಟರ್ ಸಿಟಿ ತಂಡ 2-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

- Advertisement -

ಮ್ಯಾಂಚೆಸ್ಟರ್ ಎತ್ತಿಹಾದ್ ಮೈದಾನದಲ್ಲಿ ನಡೆದ UEFA ಚಾಂಪಿಯನ್ಸ್ ಲೀಗ್’ನ ತನ್ನ ಅಂತಿಮ ಲೀಗ್ ಪಂದ್ಯದ ಮೊದಲಾರ್ಧದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡವು ಪೂರ್ಣ ಪ್ರಾಬಲ್ಯ ಸಾಧಿಸಿತ್ತಾದರೂ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ದ್ವಿತಿಯಾರ್ಧದ ಆರಂಭವಾಗಿ 5 ನಿಮಿಷ ಕಳೆಯುವಷ್ಟರಲ್ಲಿಯೇ PSG ಕಿಲಿಯನ್ ಎಂಬಾಪೆ ಆಕರ್ಷಕ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.

ಹಿನ್ನಡೆಯಿಂದ ಧೃತಿಗೆಡದ ಸಿಟಿ ತಂಡ 63ನೇ ನಿಮಿಷದಲ್ಲಿ ಸಮಬಲ ಸಾಧಿಸಿತು. ಗ್ಯಾಬ್ರಿಯಲ್ ಜೀಸಸ್-ವಾಕರ್ ಕಾರ್ಯತಂತ್ರದ ಮೂಲಕ ದೊರೆತ ಚೆಂಡನ್ನು ರಹೀಮ್ ಸ್ಟೆರ್ಲಿಂಗ್ ನಯವಾಗಿಯೇ ಗೋಲು ಬಲೆಯೊಳಗೆ ತಳ್ಳಿದರು. ಪಂದ್ಯದ 73ನೇ ನಿಮಿಷದಲ್ಲಿ ಮಹ್ರೆಝ್’ನಿಂದ ದೊರೆತ ಚೆಂಡನ್ನು ನಿಯಂತ್ರಿಸಿದ ಡೆವಿಡ್ ಸಿಲ್ವಾ ಸಹ ಆಟಗಾರ ಗ್ಯಾಬ್ರಿಯಲ್ ಜೀಸಸ್’ಗೆ ಗೋಲು ಗಳಿಸುವ ಅವಕಾಶ ಸೃಷ್ಟಿಸಿದರು. ಅದ್ಭುತವಾಗಿ ದೊರೆತ ಪಾಸ್’ಅನ್ನು ಸುಂದರ ಗೋಲಾಗಿ ಪರಿವರ್ತಿಸಿದ ಜೀಸಸ್, ಎತ್ತಿಹಾದ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಮ್ಯಾಂಚೆಸ್ಟರ್ ಸಿಟಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

- Advertisement -

ಈ ಗೆಲುವಿನೊಂದಿಗೆ UEFA ಚಾಂಪಿಯನ್ಸ್ ಲೀಗ್’ನ ಗ್ರೂಪ್ Aನಲ್ಲಿ, 12 ಅಂಕಗಳೊಂದಿಗೆ ಮ್ಯಾಂಚೆಸ್ಟರ್ ಸಿಟಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿತು. ಆಡಿದ 5 ಪಂದ್ಯಗಳಲ್ಲಿ ಸಿಟಿ 4 ಗೆಲುವು ದಾಖಲಿಸಿದೆ. ಮತ್ತೊಂದೆಡೆ 5 ಪಂದ್ಯಗಳಲ್ಲಿ 2 ಗೆಲುವು, 2 ಡ್ರಾ ಹಾಗೂ 1 ಸೋಲಿನೊಂದಿಗೆ 8 ಅಂಕಗಳೊಂದಿಗೆ PSG 2ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಉಳಿದೆರಡು ತಂಡಗಳಾದ ಆರ್’ಪಿ ಲಿಬ್ಝಿಗ್ ಹಾಗೂ ಬ್ರುಜಾಸ್ ಟೂರ್ನಿಯಿಂದ ಹೊರನಡೆದಿವೆ.

Join Whatsapp