ಸಿದ್ದರಾಮೋತ್ಸವದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಹುಬ್ಬಳ್ಳಿಯಲ್ಲಿ ಪತ್ತೆ

Prasthutha|

ಬೆಂಗಳೂರು: ಸಿದ್ದರಾಮೋತ್ಸವದಲ್ಲಿ ಭಾಗವಹಿಸಲು ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಒಂದೂವರೆ ತಿಂಗಳ ಬಳಿಕ ಪತ್ತೆಯಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

- Advertisement -


ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಅಗಸ್ಟ್ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನರ ಜೊತೆ ತೆರಳಿದ್ದ ಇವರು ವಾಪಸಾಗದೇ ನಾಪತ್ತೆಯಾಗಿದ್ದು, ಮನೆಯವರ ಸಹಿತ ಗ್ರಾಮಸ್ಥರು ಚಿಂತೆಗೀಡಾಗಿದ್ದರು.

‘ದುಡ್ಡಿನ ಆಮಿಷ ಒಡ್ಡಿ ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಈಗ ಆತ ಪತ್ತೆಯಿಲ್ಲ’ ಎಂದು ಗಿರಿಮಲ್ಲ ತಾಯಿ ಕಣ್ಣೀರು ಹಾಕಿದ್ದರು. ಇದು ಭಾರಿ ಸುದ್ದಿಯಾಗುತ್ತಲೇ ಖುದ್ದು ಸಿದ್ದರಾಮಯ್ಯ ಗಿರಿಮಲ್ಲ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ‘ನಿಮ್ಮ ಮಗ ವಾಪಸ್ ಬರುತ್ತಾನೆ. ಗಿರಿಮಲ್ಲ ಜೀವಂತ ಇದ್ದಾನೆ, ಅವನಿಗೆ ಏನೂ ಆಗಿಲ್ಲ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದಷ್ಟು ಬೇಗ ಮನೆಗೆ ಬರುತ್ತಾನೆ. ಸೆಪ್ಟೆಂಬರ್ 27ಕ್ಕೆ ಮತ್ತೆ ಬಂದು ಆರ್ಥಿಕ ಸಹಾಯ ಮಾಡುವೆ’ ಎಂದಿದ್ದರು.

- Advertisement -

ಸಿದ್ದರಾಮಯ್ಯ ಅವರ ಭವಿಷ್ಯ ನಿಜವಾಗಿದ್ದು, ಪೊಲೀಸರ ಸತತ ಹುಡುಕಾಟದಿಂದ ಗಿರಿಮಲ್ಲ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಗ್ರಾಮಕ್ಕೆ ಗಿರಿಮಲ್ಲ ಅವರನ್ನು ಗ್ರಾಮಸ್ಥರು ಕರೆತಂದಿದ್ದು, ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.



Join Whatsapp